ADVERTISEMENT

‘ಆಪರೇಷನ್‌ ಕಮಲ’ ಕಾಂಗ್ರೆಸ್‌ ಪ್ರಚಾರದ ಅಸ್ತ್ರ!

ರಾಹುಲ್‌, ಪ್ರಿಯಾಂಕ, ಸೋನಿಯಾ ಸ್ಟಾರ್‌ ಪ್ರಚಾರಕರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 4:20 IST
Last Updated 15 ಫೆಬ್ರುವರಿ 2019, 4:20 IST
   

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ‘ಆಪರೇಷನ್‌ ಕಮಲ’ವನ್ನೇ ಪ್ರಚಾರದಪ್ರಮುಖ ಅಸ್ತ್ರವಾಗಿ ಬಳಸಲು ಉದ್ದೇಶಿಸಿರುವ ಕಾಂಗ್ರೆಸ್‌, ಸ್ಟಾರ್‌ ಪ್ರಚಾರಕರಾದ ರಾಹುಲ್‌, ಪ್ರಿಯಾಂಕ ಹಾಗೂ ಸೋನಿಯಾ ಗಾಂಧಿ ಅವರನ್ನು ಸಾಧ್ಯವಾದಷ್ಟು ಹೆಚ್ಚು ಸಲ ರಾಜ್ಯಕ್ಕೆ ಕರೆತರಲು ತೀರ್ಮಾನಿಸಿದೆ.

ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪ್ರಚಾರ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿನ ಸಿದ್ದರಾಮಯ್ಯನವರ ಸರ್ಕಾರ ಜಾರಿಗೊಳಿಸಿದ್ದ ಜನಪರ ಕಾರ್ಯಕ್ರಮಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕು. ‘ನರೇಂದ್ರ ಮೋದಿ ಹೇಳಿದ್ದೇನು, ಮಾಡಿದ್ದೇನು’ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಮಿತ್ರಪಕ್ಷ ಜೆಡಿಎಸ್‌ ಜೊತೆಗೂಡಿ ರೂಪಿಸಬೇಕಾದ ತಂತ್ರಗಳು; ಮತದಾರರನ್ನು ಯಾವ ರೀತಿ ಮನವೊಲಿಸಬೇಕು ಮತ್ತು ಮತಗಟ್ಟೆಗಳನ್ನು ಹೇಗೆ ನಿಭಾಯಿಸಬೇಕು ಎಂಬ ಕುರಿತು ಕಾರ್ಯಕರ್ತರಿಗೆ ತರಬೇತಿ ನೀಡುವ ಬಗ್ಗೆಯೂ ಚರ್ಚಿಸಲಾಯಿತು.

ADVERTISEMENT

ಪಕ್ಷದ ಪ್ರಚಾರ ವೈಖರಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಮುನ್ನ ಎಲ್ಲ ನಾಯಕರ ಸಭೆ ಕರೆದು ಸಮಗ್ರವಾಗಿ ಚರ್ಚಿಸಲು ತೀರ್ಮಾನಿಸಲಾಯಿತು.

ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಎಚ್‌. ಆಂಜನೇಯ, ಹಿರಿಯ ನಾಯಕರಾದ ವೀರಣ್ಣ ಮತ್ತಿಕಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಬೇಳೂರು ಗೋಪಾಲಕೃಷ್ಣ, ಮುಖ್ಯಮಂತ್ರಿ ಚಂದ್ರು, ಎಚ್‌.ಎಂ. ರೇವಣ್ಣ, ಉಮಾಶ್ರೀ ಹಾಗೂ ಶಾಸಕ ನಾರಾಯಣರಾವ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.