ADVERTISEMENT

ಡಿ.ಕೆ. ಶಿವಕುಮಾರ್ ಬೆಂಬಲಕ್ಕೆ ನಿಂತ ಕಾಂಗ್ರೆಸ್

‘ಭಯದಿಂದ ಓಡಿಹೋಗಲ್ಲ, ಷಡ್ಯಂತ್ರಗಳನ್ನು ಎದುರಿಸುತ್ತೇನೆ’

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 20:00 IST
Last Updated 30 ಆಗಸ್ಟ್ 2019, 20:00 IST
   

ಬೆಂಗಳೂರು: ದೆಹಲಿಯಲ್ಲಿ ಹಣ ವಶಪಡಿಸಿಕೊಂಡ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿಮಾಡುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಅವರ ಬೆಂಬಲಕ್ಕೆ ನಿಂತಿದ್ದಾರೆ.

‘ಹಿಂದೆ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ರಾಜ್ಯದಲ್ಲಿ ಆಶ್ರಯ ಕೊಟ್ಟಿದ್ದಕ್ಕಾಗಿ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯವನ್ನುಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡು ಶಿವಕುಮಾರ್ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ತಪ್ಪು ಮಾಡಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ ತನಿಖಾ ಸಂಸ್ಥೆಗಳನ್ನು ದ್ವೇಷ ಸಾಧನೆಗಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೆಪಿಸಿಸಿ ಬೆಂಬಲ: ಶಿವಕುಮಾರ್ ಬೆಂಬಲಕ್ಕೆ ಪಕ್ಷ ನಿಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಕಟಿಸಿದ್ದು,ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದಂತಹ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

ADVERTISEMENT

ಪ್ರತಿ ಪಕ್ಷಗಳ ಮುಖಂಡರನ್ನು ಮಣಿಸುವ ಕೆಲಸವನ್ನು ಬಿಜೆಪಿ ನಾಯಕರು ಮುಂದುವರಿಸಿದ್ದಾರೆ. ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಫಲಿಸದಿದ್ದಾಗ, ಅವರ ವಿರುದ್ಧ ಅಧಿಕಾರಿಗಳನ್ನು ಬಿಟ್ಟು ಮಣಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಹೋದರೆ ಸಮಸ್ಯೆ ಆಗುವುದಿಲ್ಲ. ಅಂತಹವರ ಮೇಲೆ ಇದ್ದ ಪ್ರಕರಣಗಳನ್ನು ಕೈಬಿಡಲಾಗುತ್ತದೆ ಎಂದಿದ್ದಾರೆ.

ಶಿವಕುಮಾರ್ ಗುಡುಗು: ‘ನಾನುಕೆಂಪೇಗೌಡರ (ತಂದೆ ಹೆಸರು) ಮಗ. ಭಯದಿಂದ ಎಲ್ಲೂ ಹೆದರಿ ಓಡಿಹೋಗುವುದಿಲ್ಲ.ಎಲ್ಲ ಆರೋಪಗಳನ್ನೂ ಉತ್ತರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಯಾರೇ ಷಡ್ಯಂತ್ರ ಮಾಡಿದರೂ ಎದುರಿಸಬಲ್ಲೆ' ಎಂದು ಶಿವಕುಮಾರ್‌ ಗುಡುಗಿದ್ದಾರೆ.

ಗುರುವಾರ ಸಂಜೆ ಕೋರ್ಟ್ ಆದೇಶ ನೀಡಿದ್ದು, ಅದರ ಪ್ರತಿ ಸಿಗುವ ಮುನ್ನವೇ ಆತುರವಾಗಿ ರಾತ್ರಿ 9.30ಕ್ಕೆ ಮನೆಗೆ ಬಂದು ಇ.ಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದರು.

ವೈದ್ಯಕೀಯ ಕಾಲೇಜಿಗಾಗಿ ಹೋರಾಟ

ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ರದ್ದುಪಡಿಸಿ, ಅದನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ಈ ಆದೇಶ ರದ್ದುಪಡಿಸಿ, ಮತ್ತೆ ಕನಕಪುರದಲ್ಲೇ ಕಾಲೇಜು ಆರಂಭಿಸಬೇಕು ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.