ADVERTISEMENT

ಎನ್ಇಪಿ ರಚನಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಭಾಗಿ: ಸಿ.ಎನ್‌. ಅಶ್ವತ್ಥನಾರಾಯಣ

ವಿಚಾರ ಸಂಕಿರಣದಲ್ಲಿ ವಿರೋಧ ಪಕ್ಷಗಳ ವಿರುದ್ಧ ಸಚಿವ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 23:04 IST
Last Updated 24 ಸೆಪ್ಟೆಂಬರ್ 2021, 23:04 IST
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕರಡು ಸಮಿತಿಯ ಸದಸ್ಯ ಡಾ.ಎಂ.ಕೆ. ಶ್ರೀಧರ್ ಮಾತನಾಡಿದರು. ಡಾ ಆನಂದ್ ಕೆ. ಜೋಶಿ, ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಿಕ್ಷಣತಜ್ಞ ಡಾ.ಗುರುರಾಜ್ ಕರಜಗಿ, ಸಚಿವ ಬಿ.ಸಿ. ನಾಗೇಶ್ ಇದ್ದರು -ಪ್ರಜಾವಾಣಿ ಚಿತ್ರ
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕರಡು ಸಮಿತಿಯ ಸದಸ್ಯ ಡಾ.ಎಂ.ಕೆ. ಶ್ರೀಧರ್ ಮಾತನಾಡಿದರು. ಡಾ ಆನಂದ್ ಕೆ. ಜೋಶಿ, ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಿಕ್ಷಣತಜ್ಞ ಡಾ.ಗುರುರಾಜ್ ಕರಜಗಿ, ಸಚಿವ ಬಿ.ಸಿ. ನಾಗೇಶ್ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷಗಳು ಸಹ ಭಾಗಿಯಾಗಿದ್ದವು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲೆ ಘಟಕ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ–2020’ರ ಅನುಷ್ಠಾನ ಮತ್ತು ಅವಕಾಶಗಳು ಹಾಗೂ ಕಾರ್ಯತಂತ್ರಗಳು ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಎನ್‌ಇಪಿಯನ್ನು ಅತುರದಲ್ಲಿ ಅನುಷ್ಠಾನಗೊಳಿಸಲಾಗುತ್ತಿವೆ ಎಂದು ವಿರೋಧ ಪಕ್ಷಗಳು ಈಗ ಟೀಕೆ ಮಾಡುತ್ತಿವೆ. ನಮಗೆ ಏನೂ ಗೊತ್ತಿಲ್ಲ ಎಂದು ಹೇಳುತ್ತಿವೆ. ಆದರೆ, ಈ ಪ್ರಕ್ರಿಯೆಯನ್ನು ದಿಢೀರ್‌ ಆರಂಭಿಸಿಲ್ಲ. 2014ರಿಂದಲೇ ಈ ಪ್ರಕ್ರಿಯೆ ಆರಂಭವಾಗಿದೆ. ಗ್ರಾಮ ಪಂಚಾಯಿತಿಗಳ ಅಭಿಪ್ರಾಯಗಳನ್ನು ಸಹ ಪಡೆಯಲಾಗಿದೆ. ಈ ಪ್ರಕ್ರಿಯೆ ನಡೆಯುವಾಗ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಅಂದು ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್‌ ಮತ್ತು ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರು ಈ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದರು’ ಎಂದು ವಿವರಿಸಿದರು.

ADVERTISEMENT

‘75ಕ್ಕೂ ಹೆಚ್ಚು ಸಂಸದರು, ನೂರಾರು ಶಾಸಕರು, ಗಣ್ಯರು, ಶಿಕ್ಷಣ ತಜ್ಞರು, ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ಅಭಿಪ್ರಾಯಗಳನ್ನು ನೀತಿ ಸಿದ್ಧಪಡಿಸುವಾಗ ಪಡೆಯಲಾಗಿದೆ. ಆದರೆ, ಆಗ ಮುಖ್ಯಮಂತ್ರಿಯಾಗಿದ್ದವರಿಗೆ ಈ ಬಗ್ಗೆ ಪ್ರಜ್ಞೆ ಇರಲಿಲ್ಲವೇ? ಆಗ ಅವರು ಏನು ಮಾಡುತ್ತಿದ್ದರು’ ಎಂದು ಕಿಡಿಕಾರಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಸದಸ್ಯ ಪ್ರೊ. ಎಂ.ಕೆ. ಶ್ರೀಧರ್‌, ‘ಮುಂದಿನ 20 ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯು, ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ಬೆಳೆಸಲು ಪೂರಕವಾಗಿದೆ’ ಎಂದು ಪ್ರತಿಪಾದಿಸಿದರು.

‘ಈ ನೀತಿ ರೂಪಿಸುವಾಗ ಗ್ರಾಮ ಪಂಚಾಯಿತಿಯಿಂದ ರಾಷ್ಟ್ರಮಟ್ಟದವರೆಗೆ ಅಭಿಪ್ರಾಯಗಳನ್ನು ಪಡೆಯಲಾಗಿದೆ. ಸಮಾಜದ ಎಲ್ಲ ವರ್ಗಗಳ ಅಭಿಪ್ರಾಯಗಳನ್ನು ಪಡೆದು ರಚಿಸಿರುವ ಮೊದಲ ನೀತಿ ಇದಾಗಿದೆ. ನೀತಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಒಂದೇ ಗಂಟೆಯಲ್ಲಿ ಬಹಿರಂಗಪಡಿಸಲಾಯಿತು. ನಂತರ, ಸುಮಾರು ಎರಡು ಲಕ್ಷಗಳ ಅಭಿಪ್ರಾಯಗಳು ಬಂದವು. ಎಲ್ಲ ಸಲಹೆಗಳನ್ನು ಪರಿಗಣಿಸಿ ಅಂತಿಮ ಕರಡು ಸಿದ್ಧಪಡಿಸಲಾಗಿದೆ’ ಎಂದು ವಿವರಿಸಿದರು.

ನೀತಿಯ ಬಗ್ಗೆ ವಿವರಿಸಿದ ಶಿಕ್ಷಣ ತಜ್ಞ ಡಾ.ಗುರುರಾಜ್‌ ಕರಜಗಿ, ’ತ್ರಿಭಾಷಾ ಸೂತ್ರ ಅನುಸರಿಸಲು ಎನ್‌ಇಪಿಯಲ್ಲಿ ಶಿಫಾರಸು ಮಾಡಲಾಗಿದೆ. ಹಿಂದಿ ಹೇರುವ ಪ್ರಯತ್ನ ಮಾಡಿಲ್ಲ. ಏಜ್ಯುಕೇಷನ್‌ ಬ್ಯಾಂಕ್‌ ಸ್ಥಾಪಿಸಲು ಸಹ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ, ಶಿಕ್ಷಕರಿಗೂ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೂ ಅನುಕೂಲವಾಗಲಿದೆ’ ಎಂದು ವಿವರಿಸಿದರು.

‘ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವುದನ್ನು ಈ ನೀತಿಯಲ್ಲಿ ಸರಿಪಡಿಸಲಾಗಿದೆ. ರಾಜ್ಯದಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಪರಿಷತ್‌ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಮಾನದಂಡಗಳನ್ನು ನಿಗದಿಪಡಿಸುತ್ತದೆ’ ಎಂದು ಹೇಳಿದರು.

ಅಂತರರಾಷ್ಟ್ರೀಯ ಕೌಶಲಾಭಿವೃದ್ಧಿ ಸಂಸ್ಥೆಯ ಸಲಹೆಗಾರ ಡಾ. ಆನಂದ್‌ ಕೆ. ಜೋಶಿ, ಸಂಸದ ಪಿ.ಸಿ. ಮೋಹನ್‌, ಬೆಂಗಳೂರು ಕೇಂದ್ರ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷ ಮಂಜುನಾಥ್‌, ಪ್ರೊ. ಗೋಧಾಮಣಿ ಉಪಸ್ಥಿತರಿದ್ದರು.

*

ನಾಗ್ಪುರ ಶಿಕ್ಷಣ ನೀತಿ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಎನ್‌ಇಪಿ ಕರಡು ಸಮಿತಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್ ಯಾವಾಗ ನಾಗ್ಪುರಕ್ಕೆ ಹೋಗಿದ್ದರು. ಹೊಸ ನೀತಿ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಗೂ ಪೂರಕವಾಗಿದೆ
-ಬಿ.ಸಿ. ನಾಗೇಶ್‌,ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.