ADVERTISEMENT

ಮೈಸೂರು: ಕೊನೆಗೂ ಕಾಂಗ್ರೆಸ್‌ ಜೆಡಿಎಸ್ ಒಗ್ಗಟ್ಟು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 20:15 IST
Last Updated 7 ಏಪ್ರಿಲ್ 2019, 20:15 IST
ಜಿ ಟಿ ದೇವೇಗೌಡ
ಜಿ ಟಿ ದೇವೇಗೌಡ    

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ರಂಗೇರಿದ್ದು, ಕೊನೆಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಒಂದೇ ವೇದಿಕೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಅಡಗೂರು ಎಚ್.ವಿಶ್ವನಾಥ್, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಕಾಂಗ್ರೆಸ್‌ ಮುಖಂಡರಾದ ಡಾ.ಎಚ್.ಸಿ.ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ, ತನ್ವೀರ್‌ ಸೇಠ್‌ ಸೇರಿದಂತೆ ಹಲವರು ಭಾನುವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸೋಮವಾರದಿಂದಲೇ ಜಂಟಿಯಾಗಿ ಪ್ರಚಾರದ ಅಖಾಡಕ್ಕೆ ಧುಮುಕುವುದಾಗಿ ಘೋಷಿಸಿದರು.

‘ಸೋಮವಾರ ಹುಣಸೂರಿನಿಂದಲೇ ಜಂಟಿ ಪ್ರಚಾರ ಆರಂಭವಾಗುತ್ತದೆ. ಏ.12ರಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜಂಟಿಯಾಗಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 2 ಕಡೆ ಸಮಾವೇಶ ನಡೆಸುವರು. ಮಂಡ್ಯ ಲೋಕಸಭಾ ಕ್ಷೇತ್ರದ ಪ್ರಚಾರಕ್ಕಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಏ. 13ರಂದು ಬರಲಿದ್ದಾರೆ. ಈ ಸಮಾವೇಶಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಭಾಗವಹಿಸಬೇಕು’ ಎಂದು ವಿಶ್ವನಾಥ್ ಮನವಿ ಮಾಡಿದರು.

ADVERTISEMENT

‘ಮೈತ್ರಿಧರ್ಮದ ವಿರುದ್ಧ ಕೆಲಸ ಮಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ. ಕಾಂಗ್ರೆಸ್ ಸಹ ಇದೇ ಕ್ರಮ ಅನುಸರಿಸಬೇಕು ಎಂದು ಸಾ.ರಾ.ಮಹೇಶ್ ತಿಳಿಸಿದರು.

‘ಗರಂ’ ಆದ ಜಿಟಿಡಿ: ಜಂಟಿ ಪತ್ರಿಕಾಗೋಷ್ಠಿಗೂ ಮುನ್ನ ಸಚಿವ ಜಿ.ಟಿ.ದೇವೇಗೌಡ ಕೋಪ ದಿಂದ ಕಾರ್ಯಕರ್ತರ ಮೇಲೆ ರೇಗಾಡಿದರು. ನಂತರ, ಮಾತನಾಡಿ ‘ಕಾರ್ಯಕರ್ತರು ಶಿಸ್ತು ಕಲಿಯಲಿ ಎಂದು ರೇಗುತ್ತೇನೆ. ‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಬೇಕಿದೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.