ADVERTISEMENT

ರೆಸಾರ್ಟ್‌ಗೆ ಕಾಂಗ್ರೆಸ್‌ ಶಾಸಕರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 20:15 IST
Last Updated 16 ಜುಲೈ 2019, 20:15 IST

ಬೆಂಗಳೂರು: ಕಾಂಗ್ರೆಸ್ ಶಾಸಕರ ಮತ್ತಷ್ಟು ರಾಜೀನಾಮೆ ತಡೆಯುವ ಸಲುವಾಗಿ ಹೋಟೆಲ್‌ನಿಂದ ದೇವನಹಳ್ಳಿ ಬಳಿಯ ಪ್ರಕೃತಿ ರೆಸಾರ್ಟ್‌ಗೆ ಮಂಗಳವಾರ ಸ್ಥಳಾಂತರಿಸಲಾಗಿದೆ.

ನಗರದ ಯಶವಂತಪುರದಲ್ಲಿ ಇರುವ ತಾಜ್ ವಿವಾಂತ ಹೋಟೆಲ್‌ನಲ್ಲಿ ಶಾಸಕರು ತಂಗಿದ್ದರು. ನಗರದಲ್ಲೇ ಹೋಟೆಲ್ ಇರುವುದರಿಂದ ಶಾಸಕರ ನಿಯಂತ್ರಣ ಕಷ್ಟಸಾಧ್ಯವಾಗಿದ್ದು, ಸಾಕಷ್ಟು ಶಾಸಕರು ಆಗಾಗ ಹೊರಗೆ ಹೋಗುತ್ತಿದ್ದರು. ಕೆಲವರು ವಾಪಸ್ ಬರುತ್ತಿರಲಿಲ್ಲ. ಮತ್ತೆ ಕೆಲವರು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಬಿಜೆಪಿಯ ‘ಆಪರೇಷನ್ ಕಮಲ’ಕ್ಕೆ ತುತ್ತಾಗುವುದನ್ನು ತಡೆಯುವುದು, ಶಾಸಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿದ್ದು, ಅಲ್ಲಿಯವರೆಗೂಒಗ್ಗಟ್ಟು ಕಾಪಾಡುವ ಸಲುವಾಗಿ ಪಕ್ಷದ ಮುಖಂಡರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ADVERTISEMENT

ರೆಸಾರ್ಟ್‌ನಿಂದ ಹೊರಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ಮೊಬೈಲ್ ಬಳಕೆಗೆ ಕಡಿವಾಣ ಹಾಕಿದ್ದು, ತುರ್ತು ಸಂದರ್ಭ, ಕುಟುಂಬದವರ ಜತೆಗೆ ಮಾತನಾಡಲು ಮಾತ್ರ ಬಳಸುವಂತೆ ಸಲಹೆ ಮಾಡಲಾಗಿದೆ. ರಾಜೀನಾಮೆ ನೀಡಬಹುದು ಎಂಬ ಅನುಮಾನ ಇರುವ ಶಾಸಕರ ಮೇಲೆ ನಿಗಾ ವಹಿಸಿದ್ದು, ಹೊರಗಿನವರ ಜತೆಗೆ ಹೆಚ್ಚು ಸಂಪರ್ಕ ಸಾಧಿಸದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಲಾಗುತ್ತಿದೆ ಎಂದು ಮೂಲಗಳುತಿಳಿಸಿವೆ.

ಕೋರ್ಟ್ ಕಲಾಪ ವೀಕ್ಷಣೆ: ತಮ್ಮ ರಾಜೀನಾಮೆ ಅಂಗೀಕರಿಸಲು ಸೂಚಿಸುವಂತೆ ಕೋರಿ ಕಾಂಗ್ರೆಸ್ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ ಬೆಳಿಗ್ಗೆ ಆರಂಭವಾಯಿತು. ಸಂಜೆವರೆಗೂ ಟಿ.ವಿ ಮುಂದೆ ಕುಳಿತು ಕಲಾಪದ ಮಾಹಿತಿ ಪಡೆದುಕೊಂಡರು. ನಂತರ ಸ್ವಲ್ಪ ಸಮಯ ರೆಸಾರ್ಟ್‌ನಲ್ಲೇ ಸುತ್ತಾಡಿ, ವಿರಮಿಸಿದರು.

ರಾಮಲಿಂಗಾರೆಡ್ಡಿ ಹಾಜರು: ‘ವಿಧಾನ ಸಭೆಯಲ್ಲಿ ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿದ್ದು, ನಾನೂ ಸಹ ಕಲಾಪದಲ್ಲಿ ಭಾಗವಹಿಸುತ್ತೇನೆ’ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ತಿಳಿಸಿದರು.

‘ರಾಜೀನಾಮೆ ನೀಡಿದ ನಂತರ ಮುಂಬೈನಲ್ಲಿ ತಂಗಿರುವ ಶಾಸಕರು ಮೂರು ದಿನಗಳ ಹಿಂದೆ ಸಂಪರ್ಕಿಸಿದ್ದು, ಸಂತರ ಸಂಪರ್ಕ ಸಾಧ್ಯವಾಗಿಲ್ಲ. ರಾಜೀನಾಮೆ ಕೊಡುವಂತೆ ಯಾವ ಶಾಸಕರಿಗೂ ನಾನು ಹೇಳಿಲ್ಲ. ರಾಜೀನಾಮೆ ನೀಡುವ ದಿನ ಮನೆಗೆ ಬಂದು ರಾಜೀನಾಮೆ ಕೊಡುತ್ತಿದ್ದೇವೆ ಎಂದರು. ಅದಕ್ಕೆ ನಾನೂ ನೀಡುತ್ತಿರುವುದಾಗಿ ಹೇಳಿದ್ದೆ’ ಎಂದಿದ್ದಾರೆ.

ಗೃಹ ಬಂಧನ: ದಿನೇಶ್

ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರನ್ನು ‘ಗೃಹ ಬಂಧನ’ದಲ್ಲಿ ಇಡಲಾಗಿದೆ. ಮೊಬೈಲ್ ಕಿತ್ತುಕೊಂಡಿದ್ದು, ಹೊರಗೆ ಹೋಗದಂತೆ ತಡೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಆರೋಪಿಸಿದ್ದಾರೆ.

‘ಬಿಜೆಪಿ ಹಿಡಿತದಲ್ಲಿ ಸಿಲುಕಿದ್ದು, ಆ ಪಕ್ಷದಿಂದ ವಿಧಾನಸಭೆಗೆ ಟಿಕೆಟ್ ಬಯಸುತ್ತಿದ್ದಾರೆ. ಶೀಘ್ರ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.