ADVERTISEMENT

ಕಾಂಗ್ರೆಸ್‌ ಶಾಸಕ ಉಮೇಶ್‌ ಜಾಧವ್‌ ರಾಜೀನಾಮೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 10:36 IST
Last Updated 1 ಏಪ್ರಿಲ್ 2019, 10:36 IST
ಉಮೇಶ್‌ ಜಾಧವ್‌
ಉಮೇಶ್‌ ಜಾಧವ್‌   

ಬೆಂಗಳೂರು:ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಾ.ಉಮೇಶ್‌ ಜಿ. ಜಾಧವ್‌ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅವರು ಸೋಮವಾರ ಅಂಗೀಕರಿಸಿದ್ದಾರೆ.

ಉಮೇಶ್‌ ಜಾಧವ್‌ ಅವರು ನಾವು ಕೇಳಿದ ವಿವರಣೆ ಹಾಗೂ ಸ್ಪಷ್ಟನೆಗಳನ್ನು ನೀಡಿದ್ದು ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಕೆ.ಆರ್‌.ರಮೇಶ್‌ಕುಮಾರ್‌ ಅವರು ಅಂಗೀಕಾರ ಪತ್ರದಲ್ಲಿ ತಿಳಿಸಿದ್ದಾರೆ.

‘ಜಾಧವ್‌ ಅವರು ನೀಡಿರುವ ರಾಜೀನಾಮೆಯು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 202ರ ಪ್ರಕಾರ ನಿಗದಿತ ನಮೂನೆಯಲ್ಲಿ ಸಲ್ಲಿಸಿದ ಕಾರಣ ಮತ್ತು ನಾನು ಸೂಚಿಸಿದಂತೆ ಅವರು ಸಮಜಾಯಿಷಿಗಳನ್ನು ಪೂರ್ಣ ಪ್ರಮಾಣ ಪತ್ರದೊಂದಿಗೆ ಸಲ್ಲಿಸಿರುವುದರಿಂದ ಇದು ಸ್ವ–ಇಚ್ಛೆಯಿಂದ ಯಾವ ಒತ್ತಡಕ್ಕೂ ಮಣಿಯದೆ ಯಾವ ಆಮಿಷಗಳಿಗೂ ಒಳಗಾಗದೆ ತೆಗೆದುಕೊಂಡಂತಹ ನಿಲುವು ಎಂದು ಮನವರಿಕೆಯಾಗಿದೆ. ಸಂವಿಧಾನದ ಅನುಚ್ಚೇದ 190(3) ಯಲ್ಲಿ ಸಭಾಧ್ಯಕ್ಷರು ಇಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮವನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದು, ಅನುಚ್ಚೇ 190(3)ಬಿ ಯ ಪರಂತುಕದಲ್ಲಿ ಸೂಚಿಸಿದ ಹಾಗೆ ಕ್ರಮವನ್ನು ಜರುಗಿಸಿ ನಂತರ ಉಮೇಶ್‌ ಜಾಧವ್‌ ಅವರ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ರಾಜ್ಯ ವಿಧಾನಸಭೆ ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆಯನ್ನು ನನ್ನ ಸ್ವಂತ ನ್ಯಾಯಿಕ ಪ್ರಜ್ಞೆಯ ಮೇರೆಗೆ ಅಂಗೀಕರಿಸಲಾಗಿದೆ’ ಎಂದು ರಮೇಶ್‌ಕುಮಾರ್‌ ಅವರು ವಿವರಣೆ ನೀಡಿದ್ದಾರೆ.

ADVERTISEMENT

ಉಮೇಶ್ ಜಾಧವ್ ಮಾರ್ಚ್‌ 4ರಂದು ರಮೇಶ್‌ಕುಮಾರ್‌ ಅವರ ಗ್ರಾಮಕ್ಕೆ ತೆರಳಿ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಗೆ ಕೆಲವು ವಿವರಣೆ ಕೇಳಿ ಪತ್ರನ್ನೂ ಬರೆದಿದ್ದರು.

ಉಮೇಶ್‌ ಜಾಧವ್‌ ಸೇರಿದಂತೆ ನಾಲ್ಕು ಕಾಂಗ್ರೆಸ್ ಶಾಸಕರ ಮೇಲೆ ವಿಪ್ ಉಲ್ಲಂಘನೆ ದೂರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಭಾಧ್ಯಕ್ಷರಿಗೆ ನೀಡಿ, ಅವರನ್ನು ಅನರ್ಹಗೊಳಿಸಬೇಕು ಎಂದು ಕೋರಿದ್ದರು.

ರಾಜೀನಾಮೆ ಸಲ್ಲಿಕೆ ಬಳಿಕ ಬಿಜೆಪಿ ಸೇರ್ಪಡೆಯಾಗಿರುವ ಉಮೇಶ್‌ ಜಾಧವ್‌ ಅವರು ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.