ADVERTISEMENT

ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧ ಕಾಂಗ್ರೆಸ್‌ ಶಾಸಕರ ಮುನಿಸು

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 23:34 IST
Last Updated 25 ಜೂನ್ 2025, 23:34 IST
ರಣದೀಪ್ ಸಿಂಗ್ ಸುರ್ಜೇವಾಲಾ
ರಣದೀಪ್ ಸಿಂಗ್ ಸುರ್ಜೇವಾಲಾ   

ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಕ್ಕೆ ‘ಅಪರೂಪ’ವಾಗಿರುವ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧ ‘ಕೈ’ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. 

‘ರಾಜ್ಯ ಸರ್ಕಾರದ ಕೆಲವು ಸಚಿವರ ಧೋರಣೆ, ಲಂಚ ಹಾಗೂ ಕಾರ್ಯವೈಖರಿ ಬಗ್ಗೆ ಸ್ವಪಕ್ಷೀಯ ಶಾಸಕರೇ ಧ್ವನಿ ಎತ್ತಿದ್ದಾರೆ. ಈ ರೀತಿ ಧ್ವನಿ ಎತ್ತುತ್ತಿರುವುದು ಇದೇ ಮೊದಲಲ್ಲ. ಶಾಸಕರ ಅಹವಾಲು ಆಲಿಸಿ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಹಿಡಿಯಲು ಪಕ್ಷದ ರಾಜ್ಯ ಉಸ್ತುವಾರಿ ಮುಂದಾಗಬೇಕಿತ್ತು. ಅವರು ರಾಜ್ಯಕ್ಕೆ ಬರುವುದೇ ಅಪರೂಪವಾಗಿದೆ. ನಾವು ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದು ಯಾರಲ್ಲಿ’ ಎಂದು ಹಿರಿಯ ಶಾಸಕರೊಬ್ಬರು ಅಳಲು ತೋಡಿಕೊಂಡರು. 

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮುಕ್ತವಾಗಿ ನಮ್ಮ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಸುತ್ತ ಆಪ್ತ ಸಚಿವರು ಹಾಗೂ ಶಾಸಕರೇ ಇರುತ್ತಾರೆ. ನಮ್ಮ ಕಷ್ಟವನ್ನು ಈ ನಾಯಕರು ಅರ್ಥ ಮಾಡಿಕೊಳ್ಳುವುದೂ ಇಲ್ಲ. ಉಸ್ತುವಾರಿ ಅವರಲ್ಲಿ ನೋವು ತೋಡಿಕೊಳ್ಳೋಣ ಎಂದರೆ ಅವರೂ ಕೈಗೆ ಸಿಗುತ್ತಿಲ್ಲ’ ಎಂದು ಮತ್ತೊಬ್ಬ ಶಾಸಕರು ಬೇಸರ ವ್ಯಕ್ತಪಡಿಸಿದರು. 

ADVERTISEMENT

‘ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಸುರ್ಜೇವಾಲಾ ಅವರಿಗೆ ಮಧ್ಯಪ್ರದೇಶದ ಹೊಣೆ ವಹಿಸಲಾಯಿತು. ಸುಮಾರು ಆರು ತಿಂಗಳು ಆ ರಾಜ್ಯದ ಬಗ್ಗೆ ಗಮನ ಹರಿಸಿದರು. ಲೋಕಸಭಾ ಚುನಾವಣೆಯ ಬಳಿಕ ಸ್ವಂತ ರಾಜ್ಯ ಹರಿಯಾಣದ ಕಡೆಗೆ ದೃಷ್ಟಿ ನೆಟ್ಟರು. ಈಗ ಎಲ್ಲ ಚುನಾವಣೆ ಮುಗಿದಿದೆ. ರಾಜ್ಯಕ್ಕೆ ಬನ್ನಿ ಎಂದರೂ ಅವರು ಬರುತ್ತಿಲ್ಲ’ ಎಂದು ಹಿರಿಯ ಸಚಿವರೊಬ್ಬರು ಹೇಳಿದರು. 

‘ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುರ್ಜೇವಾಲಾ ಅವರು ಬೆಂಗಳೂರಿನಲ್ಲೇ ಮನೆ ಮಾಡಿದ್ದರು. ಆಗ ರಾಜ್ಯ ನಾಯಕರು ಹಾಗೂ ಮುಖಂಡರ ಜತೆಗೆ ಸಕ್ರಿಯವಾಗಿ ಹೋರಾಟದಲ್ಲಿ ಭಾಗಿಯಾಗಿದ್ದರು. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಕ್ಕೆ ಭೇಟಿ ನೀಡಿದ್ದು ಬೆರಳೆಣಿಕೆಯ ಸಂದರ್ಭಗಳಲ್ಲಿ. ಶಾಸಕರ ಅಹವಾಲಿಗೆ ಕಿವಿಯಾಗಿದ್ದು ಒಂದೆರಡು ಬಾರಿ ಅಷ್ಟೇ. ರಾಜ್ಯ ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಉಸ್ತುವಾರಿಯವರು ಪಕ್ಷ ಹಾಗೂ ಸರ್ಕಾರಕ್ಕೆ ಸೇತುವೆಯಾಗಬೇಕಿತ್ತು. ಆ ಕೆಲಸ ಆಗಿಲ್ಲ. ಪಕ್ಷದಲ್ಲಿನ ಈಗಿನ ಬಿಕ್ಕಟ್ಟಿಗೆ ಸುರ್ಜೇವಾಲಾ ಧೋರಣೆಯೂ ಒಂದು ಕಾರಣ’ ಎಂದು ಅವರು ವಿಶ್ಲೇಷಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.