ADVERTISEMENT

ಮೋದಿ ಸರ್ಕಾರದಿಂದ ತುಘಲಕ್‌ ದರ್ಬಾರ್‌: ಕಾಂಗ್ರೆಸ್‌ ಆರೋಪ

ನೋಟು ಅಮಾನ್ಯ ನಿರ್ಧಾರಕ್ಕೆ ಎರಡು ವರ್ಷ: ಕರಾಳ ದಿನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:18 IST
Last Updated 9 ನವೆಂಬರ್ 2018, 20:18 IST
ನೋಟು ಅಮಾನ್ಯ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಆನಂದರಾವ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಶಾಸಕ ರಾಮಲಿಂಗಾರೆಡ್ಡಿ ಹಾಜರಿದ್ದರು–ಪ್ರಜಾವಾಣಿ ಚಿತ್ರ
ನೋಟು ಅಮಾನ್ಯ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಆನಂದರಾವ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಶಾಸಕ ರಾಮಲಿಂಗಾರೆಡ್ಡಿ ಹಾಜರಿದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು:ಅಧಿಕ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ ಎರಡು ವರ್ಷ ಕಳೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಆನಂದರಾವ್ ವೃತ್ತದಲ್ಲಿ ಕರಾಳ ದಿನವನ್ನಾಗಿ ಆಚರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾದರು.

‘ನೋಟು ಅಮಾನ್ಯೀಕರಣ ಮೂರ್ಖತನದ ತೀರ್ಮಾನ. ಮೋದಿ ನಡೆಯಿಂದ ಬಡ ಜನರು ಸಂಕಷ್ಟಕ್ಕೆ‌ ಸಿಲುಕಿದ್ದಾರೆ’ ಎಂದು ದಿನೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ‘ಬಡವರ ಪರ ಮಾತನಾಡುವ ಮೋದಿ, ಮೇಕಪ್‌ಗಾಗಿ ಲಕ್ಷಾಂತರ ಹಣ ವ್ಯಯ ಮಾಡುತ್ತಿದ್ದಾರೆ. ಅವರು ಹಾಕುವ ಸೂಟ್‌ ಬೆಲೆ ₹ 20 ಲಕ್ಷ ಇದೆ. ಹೀಗಿದ್ದರೆ ಅಚ್ಛೇ ದಿನ್‌ ಎಲ್ಲಿಂದ ಬರಲಿದೆ’ ಎಂದು ಪ್ರಶ್ನಿಸಿದರು.

ಸಂಸದ ವಿ.ಎಸ್‌.ಉಗ್ರಪ್ಪ,‌ '800 ವರ್ಷಗಳ ಹಿಂದೆ ದೆಹಲಿಯಲ್ಲಿ ತುಘಲಕ್ ಆಡಳಿತ ಇತ್ತು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮೋದಿ. ಅವರು ನರೇಂದ್ರ ಮೋದಿ ಅಲ್ಲ, ನರೆಂದರ್ ತುಘಲಕ್ ಮೋದಿ’ ಎಂದು ತಿವಿದರು.

ಸಚಿವ ಜಮೀರ್‌ ಅಹಮ್ಮದ್‌ ಖಾನ್‌, ‘ದಿನೇ ದಿನೇ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಮೋದಿ ಸರ್ಕಾರದಲ್ಲಿ ಖಜಾನೆ ಖಾಲಿ ಆಗಿದ್ದರಿಂದ ಆರ್‌ಬಿಐನಲ್ಲಿರುವ ಮೂರೂವರೆ ಲಕ್ಷ ಕೋಟಿ ಹಣವನ್ನು ವಾಪಸ್ ಕೇಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‌ಗೌಡ, ಶಾಸಕರಾದ ರಾಮ ಲಿಂಗಾರೆಡ್ಡಿ, ಬೈರತಿ ಸುರೇಶ್, ರಿಜ್ವಾನ್ ಆರ್ಷದ್, ರೋಷನ್‌ ಬೇಗ್‌, ಮಾಜಿ ಶಾಸಕ ಆರ್.ವಿ.ದೇವರಾಜ್ ಇದ್ದರು.

**

ರಾಹುಲ್‌ ಪ್ರಧಾನಿ ಆಗುವುದು ಖಚಿತ

‘2019 ಲೋಕಸಭೆ ಚುನಾವಣೆ ನಿರ್ಣಾಯಕವಾಗಲಿದೆ. ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ. ಬಿಜೆಪಿ ಸರ್ಕಾರ ತೊಲಗಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಗ್ಯಾಸ್ ಬೆಲೆ, ತೈಲ ಬೆಲೆ ಏರಿಕೆಯಿಂದ ಅಚ್ಛೇ ದಿನ್ ಬಂತಾ? ಆರ್‌ಬಿಐ, ಸಿಬಿಐ ಸಂಸ್ಥೆಗಳನ್ನೂ ಅವರು ದುರ್ಬಳಕೆ ಮಾಡಿಕೊಂಡರು’ ಎಂದು ಖಂಡ್ರೆ ಹೇಳಿದರು.

**

ಬಿಜೆಪಿ ಮುಕ್ತ ದೇಶ ನಿರ್ಮಾಣವೇ ನಮ್ಮ ಗುರಿ. ಅದಕ್ಕಾಗಿ ನಿರಂತರ ಹೋರಾಟ ಮಾಡುತ್ತೇವೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.