ADVERTISEMENT

ರಾಜ್ಯದ ಸರ್ಕಾರದ ವಿರುದ್ಧ ನಾಳೆ ಕಾಂಗ್ರೆಸ್‌ ಪ್ರತಿಭಟನೆ

ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಗ್ರಾ.ಪಂ.ಗೆ ನಾಮನಿರ್ದೇಶನಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಮೇ 2020, 16:01 IST
Last Updated 19 ಮೇ 2020, 16:01 IST

ಬೆಂಗಳೂರು: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ರಾಜ್ಯ ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿ ಬುಧವಾರ (ಮೇ 20) ಸಾಂಕೇತಿಕ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ.

ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ಇರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲು ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬಳಿಕ ರಾಜ್ಯ ಚುನಾವಣಾ ಆಯುಕ್ತರು ಮತ್ತು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ, ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ತಪ್ಪು ನಿರ್ಧಾರಗಳ ಬಗ್ಗೆಯೂ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ.

ADVERTISEMENT

ಸಭೆಯಲ್ಲಿ ಮಾತನಾಡಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪ್ರಧಾನಿ ಯಾರ ಜೊತೆಗೂ ಚರ್ಚಿಸದೆ, ಏಕಮುಖವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ, ಕೊರೊನಾ ಸೋಂಕು ವ್ಯಾಪಕವಾಗಿದ್ದು ಆರ್ಥಿಕ ಪರಿಸ್ಥಿತಿ ಪಾತಾಳ ತಲುಪಿದೆ. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರು, ರೈತರು, ಕಾಯಕ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.

‘ವಿಮಾನಗಳ ಹಾರಾಟ ಮೊದಲೇ ರದ್ದು ಮಾಡಿದ್ದರೆ ಸೋಂಕು ಭಾರಿ ಪ್ರಮಾಣದಲ್ಲಿ ಹಬ್ಬುತ್ತಿರಲಿಲ್ಲ. ಈಗ ತಪ್ಪು ಮುಚ್ವಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ’ ಎಂದು ದೂರಿದರು.

‘ನಮ್ಮ ಸಲಹೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಕೊರೊನಾ ಕಾರಣದಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ಮುಖ್ಯಮಂತ್ರಿ ವಿಫಲರಾಗಿದ್ದಾರೆ. ಪ್ಯಾಕೇಜ್ ಹೆಸರಲ್ಲಿ ಪ್ರಧಾನಿ ಮತ್ತು ಮುಖ್ಯಮಂತ್ರಿ ಬುರುಡೆ ಬಿಡುತ್ತಿದ್ದಾರೆ. ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಶಾಸಕರು ಜನರ ಮುಂದಿಡಬೇಕು’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.