ಬೆಂಗಳೂರು: ಬಿಜೆಪಿಯ ಸುಳ್ಳಿನ ಕಾರ್ಖಾನೆಯಲ್ಲಿ ಭರಪೂರ ಸುಳ್ಳುಗಳು ತಯಾರಾಗುತ್ತಿವೆ, ಆದರೆ, ಆ ಸುಳ್ಳುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುವುದಿಲ್ಲ ಅಷ್ಟೇ ಎಂದು ಕಾಂಗ್ರೆಸ್ ಹೇಳಿದೆ.
ಆಯುಧ ಪೂಜೆಗೆ ಬಸ್ಸುಗಳ ಪೂಜಾ ಖರ್ಚಿಗೂ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ. ಪ್ರತಿ ಬಸ್ಸಿಗೆ ಕೇವಲ ₹100 ನೀಡುವಷ್ಟರ ಮಟ್ಟಿಗೆ ಸಾರಿಗೆ ಇಲಾಖೆ ದಿವಾಳಿಯಾಗಿದೆ ಎಂದು ಬಿಜೆಪಿ ಮಾಡಿದ ಟ್ವೀಟ್‌ಗೆ ಕಾಂಗ್ರೆಸ್ ಹಳೆಯ ವಿಡಿಯೊವೊಂದರ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಸಾರಿಗೆ ನೌಕರರಿಗೆ ಸಂಬಳ ಆಗದ ಬಗ್ಗೆ ನೌಕರನ ಮಗಳು , ಸಿಎಂ ಅಂಕಲ್ ಅಪ್ಪನಿಗೆ ಸಂಬಳ ಕೊಡಿ. ಮನೆಯಲ್ಲಿ ದೀಪಾವಳಿ ಹಬ್ಬವಿಲ್ಲ ಎಂದು ಹೇಳಿರುವ ಬಿಜೆಪಿ ಅವಧಿಯ ವಿಡಿಯೊ ಪೋಸ್ಟ್ ಒಂದನ್ನು ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ತಮ್ಮ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಳ್ಳಿದ ಬಿಜೆಪಿ ಈಗ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಪೋಣಿಸುತ್ತಿದೆ ಎಂದು ಟೀಕಿಸಿದೆ.
2008ರಿಂದ 2013ರ ವರೆಗೆ ಬಿಜೆಪಿ ಅವಧಿಯಲ್ಲಿ ಪ್ರತಿ ಬಸ್‌ಗೆ ಕೊಡುತ್ತಿದ್ದ ಹಣ ₹30. ಮತ್ತೆ ಬಿಜೆಪಿಯ 2019ರಿಂದ 2023ರವರೆಗೆ ಅವಧಿಯಲ್ಲಿ ಕೊಡುತ್ತಿದ್ದ ಹಣ ₹100.ಈಗ ಮತ್ತೆ ನಮ್ಮ ಸರ್ಕಾರ 100 ರೂಪಾಯಿಯಿಂದ 250 ರೂಪಾಯಿಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ ಎಂದು ಪೋಸ್ಟ್ ಮಾಡಿದೆ.
ಸುಳ್ಳಿನ ಸರಮಾಲೆ ಕಟ್ಟುವ ಬಿಜೆಪಿಯು ತನ್ನ ಆಡಳಿತಾವಧಿಯಲ್ಲಿ ಹಬ್ಬದ ಸಂದರ್ಭದಲ್ಲೂ ಸಾರಿಗೆ ನೌಕರರಿಗೆ ವೇತನ ನೀಡದೆ ಕಣ್ಣೀರು ಹಾಕಿಸಿದ್ದನ್ನು ಜನತೆ ಮರೆತಿಲ್ಲ, ಬಸ್ಸುಗಳ ಪೂಜೆಗೆ ಹೂವು, ನಿಂಬೆಹಣ್ಣಿಗೂ ಹಣ ಕೊಡದೆ ನೌಕರರು ಸ್ವಂತ ಹಣದಿಂದ ಪೂಜೆ ಮಾಡಿದ್ದನ್ನು ರಾಜ್ಯದ ಜನ ಮರೆತಿಲ್ಲ.ಸಾರಿಗೆ ಸಂಸ್ಥೆಯ ಆಸ್ತಿಗಳನ್ನು ಅಡಮಾನ ಇಟ್ಟ ಕೀರ್ತಿ ನಿಮಗೇ ಸಲ್ಲಬೇಕು ಎಂದು ಕುಟುಕಿದೆ.
ಸಂಬಳ ನೀಡದೆ ನೌಕರರ ಮನೆಯ ಹಬ್ಬದ ಸಂಭ್ರಮ ಕಿತ್ತುಕೊಂಡಿದ್ದ ಬಿಜೆಪಿ ಸರ್ಕಾರಕ್ಕೆ ಮಕ್ಕಳು ಸಿಎಂ ಅಂಕಲ್ ಸಂಬಳ ಕೊಡಿ ಎಂದು ಅಂಗಲಾಚಿದ ಕರುಣಾಜನಕ ಸ್ಥಿತಿಯು ಇತಿಹಾಸವಾಗಿ ಉಳಿದಿದೆ ಎಂದು ಟೀಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.