ADVERTISEMENT

ಬ್ಯಾಂಕಿಂಗ್‌ಗೆ ಕಂಟಕ ಕೊರೊನಾ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 19:30 IST
Last Updated 23 ಮಾರ್ಚ್ 2020, 19:30 IST

ಬೆಂಗಳೂರು: ಈಗಾಗಲೇ ವಸೂಲಾಗದ ಸಾಲದ (ಎನ್‌ಪಿಎ) ಸುಳಿಗೆ ಸಿಲುಕಿರುವ ಬ್ಯಾಂಕಿಂಗ್‌ ವ್ಯವಸ್ಥೆಗೆ ಕೊರೊನಾ ಹೊಸ ಕಂಟಕವಾಗಿ ಪರಿಣಮಿಸಲಿದೆ ಎಂದು ಬ್ಯಾಂಕಿಂಗ್‌ ವಲಯದ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ವಾಣಿಜ್ಯ ಚಟುವಟಿಕೆಗಳು ನಡೆಯದೇ ಇದ್ದರೆ ಬ್ಯಾಂಕಿಂಗ್‌ ವಹಿವಾಟು ಸ್ಥಗಿತಗೊಳ್ಳಲಿದೆ. ಬ್ಯಾಂಕಿಗೆ ಬರುವವರ ಸಂಖ್ಯೆ ಈಗಾಗಲೇ ಕಡಿಮೆಯಾಗಿದೆ. ಒಂದು ಶಾಖೆಯಲ್ಲಿ ದಿನಕ್ಕೆ ಇಬ್ಬರಿಂದ ಮೂವರು ಬಂದರೆ ಹೆಚ್ಚು. ಅವರು ಸಹ ಠೇವಣಿ ಹಿಂದೆಪಡೆಯಲು ಅಥವಾ ಕಟ್ಟಲು ಬರುವವರಾಗಿದ್ದಾರೆ. ಹೀಗೆಯೇ ಮುಂದುವರಿದರೆ ಪ್ರತಿಯೊಂದು ಸಣ್ಣಪುಟ್ಟ ಸಾಲಗಳೂ ‘ಎನ್‌ಪಿಎ’ ಆಗಲಿವೆ. ಅದರಿಂದ ಬ್ಯಾಂಕ್‌ ಮತ್ತು ಗ್ರಾಹಕರಿಬ್ಬರೂ ಸಮಸ್ಯೆ ಎದುರಿಸಬೇಕಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ಕೊರೊನಾದಿಂದ ಅಂಗಡಿಯಲ್ಲಿ ಸರಿಯಾಗಿ ವ್ಯಾಪಾರವೇ ನಡೆಯತ್ತಿಲ್ಲ. ಹೀಗಾಗಿ ಗೃಹ ಸಾಲದ ಕಂತು ಪಾವತಿಸಲು ಸಾಧ್ಯವಾಗುವುದಿಲ್ಲ’ ಎಂದು ಗ್ರಾಹಕರು ಹೇಳುತ್ತಿದ್ದಾರೆ. ಹೀಗಿರುವಾಗ, ವಾಣಿಜ್ಯ ಉದ್ದೇಶಿತ ಸಾಲ ಪಡೆದವರಿಂದ ಸಕಾಲಕ್ಕೆ ಕಂತು ಪಾವತಿಯಾಗಲಿದೆ ಎಂದು ನಂಬುವುದಾದರೂ ಹೇಗೆ ಎನ್ನುವುದು ಅವರ ಪ್ರಶ್ನೆ

ADVERTISEMENT

90 ದಿನದ ನಂತರ ಸಾಲ ಮರುಪಾವತಿ ಮಾಡದಿದ್ದರೆ ಎನ್‌ಪಿಎ ಆಗುತ್ತದೆ. ಯಾವ ವಿಧದ ಸಾಲ ಎನ್ನುವ ಆಧಾರದ ಮೇಲೆ ಅದರ ಬಡ್ಡಿದರದಲ್ಲಿಯೂ ಏರಿಕೆಯಾಗಲಿದೆ. ಈಗಿರುವ ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇದ್ದರೆ ಗೃಹ, ವಾಹನ ಸಾಲದ ಕಂತು ಸಹ ಪಾವತಿಯಾಗುವುದಿಲ್ಲ. ಇದು ಗ್ರಾಹಕರ ಸಿಬಿಲ್‌ ಸ್ಕೋರ್‌ ಕಡಿಮೆ ಮಾಡಲಿದೆ. ಬ್ಯಾಂಕ್‌ನ ಹಣಕಾಸು ಸಾಧನೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಒಟ್ಟಾರೆ ಆರ್ಥಿಕತೆಯ ಮೇಲೆಯೂ ನಕಾರಾತ್ಮಕ ಪರಿಣಾಮ ಉಂಟುಮಾಡಲಿದೆ’ ಎಂದು ಅವರು ವಿವರಿಸಿದರು.

ಸೋಂಕು ಹರಡುವುದನ್ನು ತಪ್ಪಿಸಲು ಆದಷ್ಟೂ ಡಿಜಿಟಲ್‌ ವಹಿವಾಟು ನಡೆಸುವಂತೆ ಮನವಿ ಮಾಡಲಾಗುತ್ತಿದೆ. ಆದರೆ, ಡಿಜಿಟಲ್‌ ವಹಿವಾಟಿನಲ್ಲಿ ಯಾವುದೇ ರೀತಿಯ ಏರಿಕೆ ಕಂಡುಬಂದಿಲ್ಲ’ ಎಂದರು.

ಸರಾಸರಿ ಎನ್‌ಪಿಎ

₹ 7.17 ಲಕ್ಷ ಕೋಟಿ

2019ರ ಡಿಸೆಂಬರ್ ಅಂತ್ಯಕ್ಕೆ

₹ 8.96 ಲಕ್ಷ ಕೋಟಿ

2018ರ ಮಾರ್ಚ್‌ ಅಂತ್ಯಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.