ADVERTISEMENT

ಭ್ರಷ್ಟಾಚಾರ ಆರೋಪ: ಬಿಎಸ್‌ವೈ, ವಿಜಯೇಂದ್ರಗೆ ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 15:31 IST
Last Updated 3 ಆಗಸ್ಟ್ 2021, 15:31 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಭ್ರಷ್ಟಾಚಾರ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿರುವ ಅರ್ಜಿ ಆಧರಿಸಿ ಶಾಸಕ ಬಿ.ಎಸ್. ಯಡಿಯೂರಪ್ಪ, ಅವರ ಮಗ ಬಿ.ವೈ. ವಿಜಯೇಂದ್ರ, ಶಾಸಕ ಎಸ್‌.ಟಿ. ಸೋಮಶೇಖರ್ ಮತ್ತು ಇತರರಿಗೆ ನೋಟಿಸ್ ನೀಡಲು ಹೈಕೋರ್ಟ್ ಆದೇಶಿಸಿದೆ.

ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ ಮರಡಿ, ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಪುತ್ರಿ ಪದ್ಮಾವತಿ, ಅಳಿಯ ಸಂಜಯ್ ಶ್ರೀ, ಎಸ್.ಟಿ. ಸೋಮಶೇಖರ್, ಉದ್ಯಮಿ ಚಂದ್ರಕಾಂತ ರಾಮಲಿಂಗಂ ಅವರಿಗೂ ನೋಟಿಸ್ ನೀಡಲು ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರಿದ್ದ ಪೀಠ ಆದೇಶಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಅನುಷ್ಠಾನ ಮಾಡುವಾಗ ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರು ಲಂಚ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆಅಬ್ರಹಾಂ ಖಾಸಗಿ ದೂರು ಸಲ್ಲಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಬೇಕು ಎಂದು ಅವರು ಕೋರಿದ್ದರು.

ADVERTISEMENT

ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ವಿಚಾರಣೆ ನಡೆಸಲು ರಾಜ್ಯಪಾಲರ ಪೂರ್ವಾನುಮತಿ ಬೇಕಿತ್ತು. ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದರಿಂದ ವಿಶೇಷ ನ್ಯಾಯಾಲಯ ಖಾಸಗಿ ದೂರನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿದ್ದ ಅಬ್ರಹಾಂ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗ ಯಡಿಯೂರಪ್ಪ ಮುಖ್ಯಮಂತ್ರಿ ಅಲ್ಲದಿರುವುದರಿಂದ ಪೂರ್ವಾನುಮತಿ ಅನಗತ್ಯ ಎಂದು ಅರ್ಜಿದಾರರು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.