ADVERTISEMENT

ಸಿದ್ದರಾಮಯ್ಯ, ಡಿಕೆಶಿ ಜೋಡಿ ಕಳ್ಳೆತ್ತು: ಎನ್.ರವಿಕುಮಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 19 ಮೇ 2025, 9:30 IST
Last Updated 19 ಮೇ 2025, 9:30 IST
   

ದಾವಣಗೆರೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ಜೋಡೆತ್ತುಗಳಲ್ಲ. ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿರುವ ಕಳ್ಳೆತ್ತುಗಳ ಜೋಡಿ’ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆರೋಪಿಸಿದರು.

‘ರಾಜ್ಯ ಸರ್ಕಾರ ₹ 5 ಲಕ್ಷ ಕೋಟಿ ಸಾಲದಲ್ಲಿದೆ. ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ₹ 2 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಇನ್ನೂ ₹ 1 ಲಕ್ಷ ಕೋಟಿ ಸಾಲಕ್ಕೆ ಕಳ್ಳೆತ್ತು ಜೋಡಿ ಮುಂದಾಗಿದೆ. ಈ ಇಬ್ಬರು ಕರ್ನಾಟಕವನ್ನು ನರಕಸದೃಶ್ಯ ಮಾಡುತ್ತಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿದೆ. ರಾಹುಲ್ ಗಾಂಧಿ, ಸುರ್ಜೇವಾಲ ಸೇರಿ ಅನೇಕರು ತಮ್ಮ ಖಜಾನೆ ತುಂಬಿಸಿಕೊಳ್ಳಲು ಆಗಾಗ ರಾಜ್ಯಕ್ಕೆ ಬರುತ್ತಾರೆ. ವಾಲ್ಮೀಕಿ ಹಗರಣದ ಹಣದಲ್ಲಿ ತೆಲಂಗಾಣದ ಚುನಾವಣೆ ಮಾಡಲಾಗಿದೆ. ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್ ಸೇರಿದಂತೆ ಅನೇಕ ಸಚಿವರು ವಸೂಲಿಯಲ್ಲಿ ತೊಡಗಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ಬೆಂಗಳೂರಿನಲ್ಲಿ ಮನೆ ಕಂದಾಯದ ಜೊತೆಗೆ ಪಾರ್ಕಿಂಗ್ ತೆರಿಗೆ ಕಟ್ಟಬೇಕಿದೆ. ಜನನ ಮತ್ತು ಮರಣಕ್ಕೂ ತೆರಿಗೆ ಹಾಕುವ ಸ್ಥಿತಿ ಇದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಸರ್ಕಾರಕ್ಕೆ ಜನರು ಶಾಪ ಹಾಕುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರ ಎರಡು ವರ್ಷಗಳಲ್ಲಿ ಏನು ಸಾಧನೆ ಮಾಡಿದೆ ಎಂಬುದು ಅರ್ಥವಾಗಿಲ್ಲ. ಸಾವಿರಾರು ಸಮಸ್ಯೆಗಳಿಂದ ಕರ್ನಾಟಕ ತೊಳಲಾಡುತ್ತಿದೆ. ಸರ್ಕಾರದ ದುಡ್ಡಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಾತ್ರೆ ಮಾಡುತ್ತಿದ್ದಾರೆ. ಸಮಾವೇಶಕ್ಕೆ 3,700 ಸರ್ಕಾರಿ ಬಸ್ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಿ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರದ ಭ್ರಷ್ಟಾಚಾರ ಮುಖವಾಡವನ್ನು ಗುತ್ತಿಗೆದಾರರ ಸಂಘ ಕಳಚಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿ ಸಂವಿಧಾನಕ್ಕೆ ಅಪಮಾನ ಮಾಡಿದೆ. ಸಂವಿಧಾನದ ಬದಲಾವಣೆ ಮಾಡುವುದಾಗಿ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯಸಭೆ ಸದಸ್ಯ ಸೈಯದ್‌ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹ ಎಸಗಿದ್ದಾರೆ. ಇವರ ವಿರುದ್ಧ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಶಾಲಾ– ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ. ಮಹಿಳೆಯರಿಗೂ ಸುರಕ್ಷತೆ ಇಲ್ಲವಾಗಿದೆ. ಸರ್ಕಾರದ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಅಸಮಾಧಾನವಿದೆ’ ಎಂದು ಕಿಡಿಕಾರಿದರು.

ಮಾಜಿ ಶಾಸಕ ಬಸವರಾಜ ನಾಯ್ಕ, ಮುಖಂಡರಾದ ಲೋಕಿಕೆರೆ ನಾಗರಾಜ್, ಬಿ.ಜೆ.ಅಜಯ್‌ಕುಮಾರ್, ಅನಿಲ್‌ ಕುಮಾರ್‌ ನಾಯ್ಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.