ADVERTISEMENT

ಧಾರ್ಮಿಕ ಪರಿಷತ್ ಆಯ್ಕೆಯಲ್ಲಿ ಸರ್ಕಾರದ ಹಸ್ತಕ್ಷೇಪ: ಕೋಟ ಶ್ರೀನಿವಾಸಪೂಜಾರಿ ಆರೋಪ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 15:41 IST
Last Updated 26 ಫೆಬ್ರುವರಿ 2024, 15:41 IST
ಕೋಟ ಶ್ರೀನಿವಾಸಪೂಜಾರಿ
ಕೋಟ ಶ್ರೀನಿವಾಸಪೂಜಾರಿ   

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನು ಕಡೆಗಣಿಸಿರುವುದು ಮಾತ್ರವಲ್ಲದೇ, ಹೊಸ ಮಸೂದೆಯ ಮೂಲಕ ಧಾರ್ಮಿಕ ಪರಿಷತ್ತಿನ ಆಯ್ಕೆ ಪ್ರಕ್ರಿಯೆಯಲ್ಲೂ ಹಸ್ತಕ್ಷೇಪಕ್ಕೆ ಮುಂದಾಗಿದೆ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸಪೂಜಾರಿ ಆರೋಪಿಸಿದರು.

ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯವಾಗಿ ಮುಖ್ಯಮಂತ್ರಿ ಆದಿಯಾಗಿ ಎಲ್ಲ ಸಚಿವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

‘ಎ ದರ್ಜೆಯ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಅಧಿಕಾರ ಧಾರ್ಮಿಕ ಪರಿಷತ್ತಿಗಿದೆ. ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ತು ಮಾಡುತ್ತದೆ. ಧಾರ್ಮಿಕ ಪರಿಷತ್‌ ಮೂಲಕ ಸದಸ್ಯರನ್ನು ಆಯ್ಕೆ ಮಾಡಿದ ನಂತರವೇ ಅಧ್ಯಕ್ಷರ ಆಯ್ಕೆ ಆಗುತ್ತದೆ. ರಾಮಲಿಂಗಾರೆಡ್ಡಿ ಅವರು ಮಂಡಿಸಿರುವ ಮಸೂದೆಯ ಪ್ರಕಾರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನು ಸರ್ಕಾರವೇ ನೇಮಕ ಮಾಡುತ್ತದೆ. ಈ ಹಸ್ತಕ್ಷೇಪವನ್ನು ನಾವು ವಿರೋಧಿಸುತ್ತೇವೆ’ ಎಂದು ಪೂಜಾರಿ ಹೇಳಿದರು.

ADVERTISEMENT

‘ಕಳೆದ ವರ್ಷ ನಮ್ಮ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಗೆ ₹250 ಕೋಟಿ ನೀಡಿತ್ತು. ಈ ಬಾರಿ ಕಾಂಗ್ರೆಸ್‌ ಸರ್ಕಾರ ಕೇವಲ ₹50 ಕೋಟಿ ಮಾತ್ರ ಕೊಟ್ಟಿದೆ. ನಮ್ಮ ಅವಧಿಯಲ್ಲಿ ಅರ್ಚಕರಿಗೆ ಮನೆ ಕೊಟ್ಟಿದ್ದು ಮಾತ್ರವಲ್ಲದೇ, ತಸ್ತೀಕ್‌ ಮೊತ್ತವನ್ನು ₹48,000 ಕ್ಕೆ ಏರಿಸಲಾಗಿತ್ತು’ ಎಂದರು.

‘ದೇವಸ್ಥಾನದ ಒಟ್ಟು ಆದಾಯದಿಂದ ಶೇ 10ರಷ್ಟು ಪಡೆಯುವ ಮಸೂದೆ ಜಾರಿಗೆ ತರಲು ಮುಂದಾಗಿರುವುದರಿಂದ ದೇವಸ್ಥಾನದ ಒಟ್ಟು ಆರ್ಥಿಕ ವ್ಯವಸ್ಥೆ ಕುಸಿಯುತ್ತದೆ. ಇದನ್ನು ತಡೆಯಬೇಕು ಎಂಬ ಕಾರಣಕ್ಕೆ ನಾವು ವಿರೋಧಿಸಿದ್ದೇವೆ. ದುರದೃಷ್ಟ ಎಂದರೆ ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ಪೂಜಾರಿ ಹೇಳಿದರು.

‘ದೇವಸ್ಥಾನಗಳಲ್ಲಿ ಅಭಿವೃದ್ದಿಗಾಗಿ ಕಾಯ್ದೆಗೆ ತಿದ್ದುಪಡಿ ತಂದು 33,500 ದೇವಸ್ಥಾನಗಳಿಗೆ ತಸ್ತೀಕ್‌ ನೀಡುವ ಯೋಜನೆ ರೂಪಿಸಿದ್ದೇ ನಮ್ಮ ಸರ್ಕಾರ. ನಾನು ಇಲಾಖೆಯ ಸಚಿವನಾಗಿದ್ದಾಗ ಅರ್ಚಕರಿಗೆ ಪಿಂಚಣಿ, ಆರೋಗ್ಯ ವಿಮೆ, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಅರ್ಚಕರಿಗೆ ಮನೆ ಮಂಜೂರು ಮಾಡಿದ್ದೇವೆ’ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯರಾದ ಕೆ.ಎಸ್‌.ನವೀನ್‌, ಪ್ರತಾಪ್‌ ಸಿಂಹ ನಾಯಕ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.