ADVERTISEMENT

ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಚರ್ಚೆಗೆ ದಿನಾಂಕ ನಿಗದಿ ಪಡಿಸುವಂತೆ ಬಿಜೆಪಿ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 18:44 IST
Last Updated 2 ಫೆಬ್ರುವರಿ 2021, 18:44 IST
ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವರು ಸಭಾಪತಿ ಪದಚ್ಯುತಿ ನಿರ್ಣಯ ಮಂಡಿಸುತ್ತಿದ್ದಂತೆ, ಬೆಂಬಲ ವ್ಯಕ್ತಪಡಿಸಿ 10ಕ್ಕೂ ಹೆಚ್ಚು ಸದಸ್ಯರು ಎದ್ದು ನಿಂತರು ಪ್ರಜಾವಾಣಿ ಚಿತ್ರ
ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವರು ಸಭಾಪತಿ ಪದಚ್ಯುತಿ ನಿರ್ಣಯ ಮಂಡಿಸುತ್ತಿದ್ದಂತೆ, ಬೆಂಬಲ ವ್ಯಕ್ತಪಡಿಸಿ 10ಕ್ಕೂ ಹೆಚ್ಚು ಸದಸ್ಯರು ಎದ್ದು ನಿಂತರು ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಗಳವಾರ ಮಂಡಿಸಿದ ಆಡಳಿತಾರೂಢ ಬಿಜೆಪಿ ಸದಸ್ಯರು, ನಿರ್ಣಯದ ಮೇಲಿನ ಚರ್ಚೆಗೆ ಸಮಯ ನಿಗದಿ ಮಾಡಬೇಕು ಎಂದು ಪಟ್ಟು ಹಿಡಿದ ಘಟನೆ ನಡೆಯಿತು.

ದಿನದ ಕಾರ್ಯಸೂಚಿಯ ಪಟ್ಟಿಯಲ್ಲಿ ಕಲಾಪದ ಕೊನೆಯಲ್ಲಿ ಸಭಾಪತಿ ಸ್ಥಾನದ ಪದಚ್ಯುತಿಯ ಪ್ರಸ್ತಾಪ ಇತ್ತು. ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರೇ ಈ ವಿಷಯ ಪ್ರಸ್ತಾಪಿಸಿದರು. ನಿರ್ಣಯ ಮಂಡಿಸಿ ಎಂದು ಬಿಜೆಪಿಯ ಆಯನೂರು ಮಂಜುನಾಥ್ ಅವರಿಗೆ ಸೂಚಿಸಿದರು.

‘ಕರ್ನಾಟಕ ವಿಧಾನಪರಿಷತ್‌ನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 165ರ ಅಡಿ ಕೆ. ಪ್ರತಾಪಚಂದ್ರಶೆಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ತೆಗೆದು ಹಾಕಬೇಕು’ ಎಂಬ ನಿರ್ಣಯವನ್ನು ಆಯನೂರು ಮಂಡಿಸಿದರು. ಇದಕ್ಕೆ ಡಾ. ತಳವಾರ ಸಾಬಣ್ಣ, ಅರುಣ್ ಶಹಾಪುರ, ಎಸ್.ವಿ. ಸಂಕನೂರ, ಮಹಾಂತೇಶ್ ಕವಟಗಿಮಠ ಬೆಂಬಲ ವ್ಯಕ್ತಪಡಿಸಿದರು.

ADVERTISEMENT

ನಿರ್ಣಯದ ಮೇಲಿನ ಚರ್ಚೆಗೆ ಸಮಯ ನಿಗದಿ ಮಾಡಬೇಕು. ಯಾವತ್ತು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, ‘ನಿಯಮದ ಪ್ರಕಾರ ಐದು ದಿನಗಳ ಕಾಲಾವಕಾಶವಿದೆ. ಐದು ದಿನದೊಳಗೆ ಒಂದು ದಿನ ಈ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗುವುದು’ ಎಂದರು.

‘ನಿಯಮದ ಪ್ರಕಾರ ಐದು ದಿನ ಸಮಯ ಇರುವುದು ಹೌದು. ಐದನೇ ದಿನವೆಂದರೆ ಫೆ.6 ಆಗುತ್ತದೆ. ಅಷ್ಟರೊಳಗೆ ಪ್ರಸಕ್ತ ಅಧಿವೇಶನದ ಅವಧಿ ಮುಕ್ತಾಯವಾಗುತ್ತದೆ. ಚರ್ಚೆಯ ದಿನಾಂಕ ಈಗಲೇ ಘೋಷಿಸುವುದು ಉತ್ತಮ’ ಎಂದು ಕಾನೂನು ಸಚಿವರೂ ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ಕಾನೂನು ನನಗೂ ಗೊತ್ತಿದೆ. ನಿಯಮದಂತೆ ಐದು ದಿನಗಳೊಳಗೆ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ಕಾರ್ಯಕಲಾಪ ಪಟ್ಟಿಯಲ್ಲಿ ದಿನಾಂಕ ತಿಳಿಸಲಾಗುವುದು’ ಎಂದು ಸಭಾಪತಿ ಪುನರುಚ್ಚರಿಸಿದರು.

‘ಸಭಾಪತಿ ಅವರ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ. ನೀವು ಹೇಳಿದ ದಿನವೇ ಚರ್ಚೆ ನಡೆಸುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.