ADVERTISEMENT

ಬಿಳಿಕಲ್‌ ಸಂರಕ್ಷಿತ ಅರಣ್ಯ ಪ್ರದೇಶ: ಹುಲಿ ಸಫಾರಿಗೆ ಕೊನೆಗೂ ಕೂಡಿ ಬಂತು ಕಾಲ

ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದ ಹೊಸ ಅತಿಥಿಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಫೆಬ್ರುವರಿ 2019, 19:45 IST
Last Updated 25 ಫೆಬ್ರುವರಿ 2019, 19:45 IST
ಹುಲಿ
ಹುಲಿ   

ಹೊಸಪೇಟೆ: ಇಲ್ಲಿನ ಬಿಳಿಕಲ್‌ ಸಂರಕ್ಷಿತ ಅರಣ್ಯ ಪ್ರದೇಶದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಎರಡು ಹುಲಿಗಳನ್ನು ತರಲಾಗಿದ್ದು,ಹುಲಿ ಸಫಾರಿ ಆರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಂತಾಗಿದೆ.

ಮೈಸೂರಿನ ಪ್ರಾಣಿ ಸಂಗ್ರಹಾಲಯದಿಂದ ಕ್ರಮವಾಗಿ ಏಳು ಮತ್ತು ಆರು ವರ್ಷದ ರಮ್ಯಾ ಹಾಗೂ ಪೃಥ್ವಿ ಹೆಸರಿನ ಹುಲಿಗಳನ್ನು ಜೈವಿಕ ಉದ್ಯಾನಕ್ಕೆ ತರಲಾಗಿದೆ. ಸಫಾರಿ ಆರಂಭಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಕೊನೆಯ ಹಂತದ ಕೆಲಸ ಪ್ರಗತಿಯಲ್ಲಿದೆ. ಮಾ.2ರಂದು ಉದ್ಘಾಟನೆಗೊಳ್ಳಲಿರುವ ‘ಹಂಪಿ ಉತ್ಸವ’ದ ದಿನವೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ಸಫಾರಿಗೆ ಚಾಲನೆ ಕೊಡಿಸಲು ಚಿಂತನೆ ನಡೆದಿದೆ.

‘ಪರಿಸರ ಇಲಾಖೆಯಿಂದ ಅನುಮತಿ ಪಡೆಯದೇ ಸಫಾರಿ ಆರಂಭಿಸಲಾಗುತ್ತಿದೆ’ ಎಂದು ಪರಿಸರವಾದಿ ಸಂತೋಷ್‌ ಮಾರ್ಟಿನ್‌ ಎಂಬುವರು ತಕರಾರು ತೆಗೆದು ನ್ಯಾಯಾಲಯದ ಮೊರೆ ಹೋಗಿದ್ದರು. ನಿಧಾನ ಗತಿ ಕಾಮಗಾರಿ ಕೂಡ ವಿಳಂಬಕ್ಕೆ ಕಾರಣವಾಗಿತ್ತು. ‘ಈಗ ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿದ್ದು, ಸಫಾರಿ ಆರಂಭಕ್ಕೆ ಎದುರಾಗಿದ್ದ ವಿಘ್ನಗಳು ದೂರವಾಗಿವೆ’ ಎಂದು ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪುರುಷೋತ್ತಮ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಎರಡು ಹುಲಿಗಳನ್ನು ಈಗಷ್ಟೇ ಉದ್ಯಾನಕ್ಕೆ ತರಲಾಗಿದೆ. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ. ‘ಹಂಪಿ ಉತ್ಸವ’ದ ಸಂದರ್ಭದಲ್ಲಿ ಸಫಾರಿ ಆರಂಭಿಸುವ ಕುರಿತು ಚಿಂತನೆ ನಡೆದಿದೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

‘ಇಷ್ಟರಲ್ಲೇ ಸಿಂಹ, ಆನೆಗಳನ್ನು ತಂದು ಆ ಎರಡು ಸಫಾರಿ ಆರಂಭಿಸಲಾಗುವುದು. ಅದಾದ ಬಳಿಕ ಹಂತ ಹಂತವಾಗಿಚಿರತೆ, ಕತ್ತೆಕಿರುಬ, ಕರಡಿ, ಬಿಳಿ ನವಿಲು, ಮೊಸಳೆಗಳನ್ನು ತರಲಾಗುವುದು. ಈಗಾಗಲೇ ಕೃಷ್ಣಮೃಗ, ಜಿಂಕೆ ಹಾಗೂ ನೀಲ್‌ಗಾಯ್‌ ಉದ್ಯಾನಕ್ಕೆ ತರಲಾಗಿದ್ದು, ಅವುಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿವೆ. ಅದಕ್ಕೆ ಸಾಕ್ಷಿ ಅವುಗಳ ಸಂತತಿ ವೃದ್ಧಿಯಾಗುತ್ತಿರುವುದು’ ಎಂದು ತಿಳಿಸಿದರು.

149.50 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿರುವ ಜಾಗದಲ್ಲಿ ಉದ್ಯಾನ ನಿರ್ಮಾಣಕ್ಕೆ 2010ರಲ್ಲಿ ಚಾಲನೆ ಸಿಕ್ಕಿತ್ತು. ತಲಾ 35 ಹೆಕ್ಟೇರ್‌ ಪ್ರದೇಶವನ್ನು ಆನೆ, ಹುಲಿ ಮತ್ತು ಸಿಂಹ ಸಫಾರಿಗೆ ಮೀಸಲಿಡಲಾಗಿದೆ. ಉದ್ಯಾನಕ್ಕೆ ಸೇರಿದ ಜಾಗದ ಸುತ್ತಲೂ ತಂತಿಬೇಲಿ, ಐದು ಕೆರೆಗಳ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ.

2018ರ ನವೆಂಬರ್‌ನಲ್ಲಿ ಹುಲಿ ಸಫಾರಿ ಆರಂಭಿಸಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಮೂರು ತಿಂಗಳು ವಿಳಂಬವಾಗಿ ಸಫಾರಿ ಆರಂಭಕ್ಕೆ ಮಹೂರ್ತ ಕೂಡಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.