ADVERTISEMENT

ಗೋಹತ್ಯೆ: ಸದ್ಯಕ್ಕೆ ಹಳೇ ನಿಯಮವೇ ಅನ್ವಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 19:00 IST
Last Updated 18 ಜನವರಿ 2021, 19:00 IST

ಬೆಂಗಳೂರು: ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ನಿಯಮಾವಳಿ ಜಾರಿಗೆ ಬರುವ ತನಕ ಕೇಂದ್ರದ ಸರ್ಕಾರದ 1978ರಪ್ರಾಣಿಗಳ ಸಾಗಣೆ ನಿಯಮಗಳೇ ಅನ್ವಯವಾಗಲಿವೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಸಂಬಂಧ ನಿಯಮಾವಳಿಗಳನ್ನು ಸಿದ್ಧಪಡಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಅವುಗಳು ಅಧಿಕೃವಾಗಿ ಜಾರಿಗೆ ಬರುವ ತನಕ ಜಾನುವಾರುಗಳ ಸಾಗಣೆಗೆ ಕೇಂದ್ರದ ನಿಯಮಗಳೇ ಇರಲಿವೆ ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವಡಗಿ ವಿವರಿಸಿದರು.

ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಪ್ರಶ್ನಿಸಿ ಮಹಮದ್‌ ಆರಿಫ್‌ ಜಮೀಲ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.‌ ಓಕಾ ನೇತೃತ್ವದ ವಿಭಾಗೀಯ ಪೀಠ, ನಿಯಮಾವಳಿಗಳೇ ಇಲ್ಲದೇ ಕೇವಲ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಹೇಗೆ ಸಾಧ್ಯ ಎಂದು ಈ ಹಿಂದಿನ ವಿಚಾರಣೆ ವೇಳೆ ಸರ್ಕಾರವನ್ನು ಪ್ರಶ್ನಿಸಿತ್ತು.

ADVERTISEMENT

ನ್ಯಾಯಾಲಯಕ್ಕೆ ಸೋಮವಾರ ಅಫಿಡವಿಟ್‌ ಸಲ್ಲಿಸಿದ ಸರ್ಕಾರದ ಪರ ವಕೀಲರು, ನಿಯಮಾವಳಿ ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. 8 ವರ್ಷಗಳ ಅಂಕಿ ಅಂಶ ಗಮನಿಸಿದರೆ ರಾಜ್ಯದಲ್ಲಿ ದನಕರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. 2012ರಲ್ಲಿ 95,16,484 ಗೋವುಗಳಿದ್ದವು. 2019ರ ವೇಳೆಗೆ ಈ ಸಂಖ್ಯೆ 84,69,004ಕ್ಕೆ ಇಳಿಕೆಯಾಗಿದೆ. ವರ್ಷಕ್ಕೆ 2,38,296 ದನಕರುಗಳು ಕಸಾಯಿಖಾನೆ ಸೇರುತ್ತಿವೆ. ದಿನಕ್ಕೆ 652 ದನಕರುಗಳು ಹತ್ಯೆಯಾಗುತ್ತಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.