ADVERTISEMENT

70 ವೈದ್ಯ ವಿದ್ಯಾರ್ಥಿಗಳಿಗೆ ಹೊಸದಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲು ಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 16:58 IST
Last Updated 29 ಜೂನ್ 2023, 16:58 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ನಿಯಮಗಳಿಗೆ ಅನುಗುಣವಾಗಿ ಪ್ರಾಯೋಗಿಕ ಪರೀಕ್ಷೆ ನಡೆಸದ ಹಿನ್ನೆಲೆಯಲ್ಲಿ 70 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ಹೊಸದಾಗಿ ನಡೆಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಸಂಬಂಧ ಅನಿರುದ್ಧ ಮತ್ತಿತರ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

‘ಪ್ರತಿಯೊಬ್ಬ ಪರೀಕ್ಷಾ ಮೇಲ್ವಿಚಾರಕರು ಸ್ವತಂತ್ರವಾಗಿ ಅಂಕ ನೀಡಬೇಕಾಗಿಲ್ಲ’ ಎಂಬ ವಿಶ್ವವಿದ್ಯಾಲಯದ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.

ADVERTISEMENT

‘ಎಂಸಿಐ ನಿಯಮಾನುಸಾರ ಪ್ರಾಯೋಗಿಕ ಮತ್ತು ಥಿಯರಿ ಪರೀಕ್ಷೆಗೆ ನಾಲ್ವರು ಪರೀಕ್ಷಾ ಮೇಲ್ವಿಚಾರಕರು ಇರಬೇಕು. ಪ್ರತಿಯೊಬ್ಬ ಪರೀಕ್ಷಕರೂ ಸ್ವತಂತ್ರವಾಗಿ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಿ ಅಂಕ ನೀಡಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯ ಅನೇಕ ಬಾರಿ ಆದೇಶಿಸಿದ್ದರೂ ಆರ್‌ಜಿಯುಎಚ್‌ಎಸ್ ಹಳೆಯ ದೋಷಗಳನ್ನೇ ಪುನರಾವರ್ತಿಸುತ್ತಿದೆ’ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.

‘ಎಂಸಿಐನ ಪದವಿ ವೈದ್ಯಕೀಯ ಶಿಕ್ಷಣ ಕಾಯ್ದೆ-1977ರ ನಿಯಮ 13ರ ಪ್ರಕಾರ ಪ್ರಾಯೋಗಿಕ ಅಥವಾ ಕ್ಲಿನಿಕಲ್ ಪರೀಕ್ಷೆಗಳನ್ನು ಹೊಸದಾಗಿ ನಡೆಸಬೇಕು. ಪೂರಕ ಪರೀಕ್ಷೆಗೂ ಮುನ್ನ ಹೊಸದಾಗಿ ಪರೀಕ್ಷೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.

ಅರ್ಜಿದಾರರು 2023ರ ಫೆಬ್ರುವರಿಯಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಅವರು, ‘ಪದವಿ ವೈದ್ಯಕೀಯ ಶಿಕ್ಷಣ ಕಾಯ್ದೆ-1997ರ ನಿಯಮ 13 (2)ರ ಅಡಿಯಲ್ಲಿ ನಾಲ್ವರು ಪರೀಕ್ಷಕರು ಪ್ರಾಯೋಗಿಕ ಪರೀಕ್ಷೆ ನಡೆಸಿ ಪ್ರತ್ಯೇಕವಾಗಿ ಅಂಕಗಳನ್ನು ನೀಡಬೇಕು. ಆದರೆ ವಿಶ್ವವಿದ್ಯಾಲಯ ನಿಯಮಗಳ ಪಾಲನೆ ಮಾಡದೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗಿದೆ’ ಎಂದು ಆಕ್ಷೇಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.