ADVERTISEMENT

25 ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಪೋಲು: ಕೊಪ್ಪಳಯಲ್ಲಿ ಕೋವಿಶೀಲ್ಡ್ ವ್ಯರ್ಥ

ವರುಣ ಹೆಗಡೆ
Published 22 ಡಿಸೆಂಬರ್ 2021, 19:45 IST
Last Updated 22 ಡಿಸೆಂಬರ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ‘ಕೋವ್ಯಾಕ್ಸಿನ್’ ಲಸಿಕೆಯು ಅಧಿಕ ಪ್ರಮಾಣದಲ್ಲಿ ಪೋಲಾಗುತ್ತಿದ್ದು, 10 ಜಿಲ್ಲೆಗಳಲ್ಲಿ ಶೇ 2ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ವ್ಯರ್ಥವಾಗಿದೆ.

ಈವರೆಗೆ 8.36 ಕೋಟಿಗೂ ಅಧಿಕ ಡೋಸ್‌ಗಳನ್ನು ಆದ್ಯತೆ ಅನುಸಾರ ನೀಡಲಾಗಿದೆ. ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕಂಪನಿಯ ‘ಕೋವಿಶೀಲ್ಡ್’ ಲಸಿಕೆಯನ್ನು 7.38 ಕೋಟಿ ಡೋಸ್‌ಗಳಷ್ಟು ಒದಗಿಸಿದರೇ, 96.71 ಲಕ್ಷ ಡೋಸ್‌ಗಳಷ್ಟುಭಾರತ್ ಬಯೋಟೆಕ್ ಕಂಪನಿಯ ‘ಕೋವ್ಯಾಕ್ಸಿನ್’ ಲಸಿಕೆ ವಿತರಿಸಲಾಗಿದೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ‘ಕೋವಿಶೀಲ್ಡ್’ ಲಸಿಕೆಯ ವ್ಯರ್ಥವಾಗದಂತೆ ತಡೆಯಲಾಗಿದೆ. ಸೀಶೆಯಲ್ಲಿರುವ ಹೆಚ್ಚುವರಿ ಡೋಸ್‌ಗಳನ್ನೂ ಬಳಸಿಕೊಳ್ಳಲಾಗಿದೆ. ಆದರೆ, ‘ಕೋವ್ಯಾಕ್ಸಿನ್’ ಲಸಿಕೆಯು 25 ಜಿಲ್ಲೆಗಳಲ್ಲಿ ವ್ಯರ್ಥವಾಗಿದ್ದು, ಒಟ್ಟಾರೆ ಪೋಲು ಪ್ರಮಾಣಶೇ 1.77ರಷ್ಟಿದೆ.

ADVERTISEMENT

1.29 ಲಕ್ಷಕ್ಕೂ ಅಧಿಕ ಡೋಸ್‌ಗಳು ‘ಕೋವ್ಯಾಕ್ಸಿನ್’ ಲಸಿಕೆ ವ್ಯರ್ಥವಾಗಿದೆ.ಬಾಗಲಕೋಟೆಯಲ್ಲಿ ಶೇ 6.23 ರಷ್ಟು ಡೋಸ್‌ಗಳು ಪೋಲಾಗಿದ್ದು, ರಾಜ್ಯದಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ವ್ಯರ್ಥ ಮಾಡಿದ ಜಿಲ್ಲೆಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದೆ. ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಕೋಲಾರ ಹಾಗೂ ಚಾಮರಾಜನಗರದಲ್ಲಿ ‘ಕೋವಾಕ್ಸಿನ್‌’ ಲಸಿಕೆ ವ್ಯರ್ಥವಾಗದಂತೆ ವಿತರಿಸ
ಲಾಗಿದೆ.

18 ಜಿಲ್ಲೆಗಳಲ್ಲಿ ಪೋಲು ತಡೆ:‘ಕೋವಿಶೀಲ್ಡ್’ ಲಸಿಕೆ ಕೊಪ್ಪಳ (ಶೇ 3.2) ಹಾಗೂ ಬಳ್ಳಾರಿಯಲ್ಲಿ (ಶೇ 2.43) ಹೆಚ್ಚಿನ ಪ್ರಮಾಣದಲ್ಲಿ ಪೋಲಾಗಿದೆ. ಉಡುಪಿ, ಚಿಕ್ಕಮಗಳೂರು, ಕೋಲಾರ ಸೇರಿದಂತೆ 18 ಜಿಲ್ಲೆಗಳಲ್ಲಿ ಈ ಲಸಿಕೆಯ ಪೋಲು ತಡೆಯಲಾಗಿದೆ.

4.72 ಕೋಟಿಗೂ ಅಧಿಕ ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 3.63 ಕೋಟಿ ಮಂದಿ ಎರಡೂ ಡೋಸ್‌ಗಳನ್ನೂ ಹಾಕಿಸಿಕೊಂಡಿದ್ದಾರೆ.‌ಈ ವರ್ಷದ ಅಂತ್ಯದೊಳಗೆ 18 ವರ್ಷಗಳು ಮೇಲ್ಪಟ್ಟ ಎಲ್ಲರಿಗೂ ಎರಡು ಡೋಸ್ ಲಸಿಕೆ ವಿತರಿಸುವ ಗುರಿಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ. ಸದ್ಯ 60 ಲಕ್ಷಕ್ಕೂ ಅಧಿಕ ಡೋಸ್‌ಗಳು ದಾಸ್ತಾನು ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

‘ಪೋಲು ತಡೆಗೆ ಕ್ರಮ’
‘ಯಾವುದೇ ಲಸಿಕೆ ವಿತರಣೆ ವೇಳೆ ಕೆಲ ಡೋಸ್‌ಗಳು ವ್ಯರ್ಥವಾಗುವುದು ಸಾಮಾನ್ಯ. ‘ಕೋವ್ಯಾಕ್ಸಿನ್’ ಲಸಿಕೆ ಬಳಕೆಯ ಅವಧಿ ಹೆಚ್ಚಿಸಲಾಗಿದೆ.ಸೀಶೆಯ ಮುಚ್ಚಳ ತೆರೆದ ಬಳಿಕ 2ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಿಸಿ, 28 ದಿನಗಳವರೆಗೆ ವಿತರಿಸಲು ಅವಕಾಶವಿದೆ. ಇದರಿಂದ ಮುಂದಿನ ದಿನಗಳಲ್ಲಿ ಪೋಲು ತಡೆ ಸಾಧ್ಯ’ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಕೋವಿಶೀಲ್ಡ್‌ ಲಸಿಕೆ ಒಂದು ಸೀಶೆಯಲ್ಲಿ 10 ಡೋಸ್, ಕೋವ್ಯಾಕ್ಸಿನ್ ಲಸಿಕೆಯು 20 ಡೋಸ್ ಇರುತ್ತದೆ.ನಿಗದಿತ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಬರದಿದ್ದಲ್ಲಿ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ‘ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.