ADVERTISEMENT

100ಕ್ಕೂ ಹೆಚ್ಚು ಗಣ್ಯರಿಗೆ ಕೊವ್ಯಾಕ್ಸಿನ್‌ ಲಸಿಕೆ ಪ್ರಯೋಗ

ಸಚಿವರು, ಐಪಿಎಸ್‌ ಅಧಿಕಾರಿಗಳಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 21:14 IST
Last Updated 26 ಡಿಸೆಂಬರ್ 2020, 21:14 IST
   

ಬೆಂಗಳೂರು: ಕೋವಿಡ್‌ಗೆ ದೇಸೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊವ್ಯಾಕ್ಸಿನ್‌ ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಯುತ್ತಿದೆ. ಈ ಹಂತದಲ್ಲಿ 100ಕ್ಕೂ ಅಧಿಕ ಗಣ್ಯರಿಗೆ ಈ ಲಸಿಕೆ ಪ್ರಯೋಗ ಮಾಡಲಾಗಿದೆ ಎಂದು ಈ ಪರೀಕ್ಷೆ ನಡೆಸುತ್ತಿರುವ ಪ್ರಯೋಗಾಲಯ ಹೇಳಿಕೊಂಡಿದೆ.

‘14 ಮಂದಿ ಸಚಿವರು ಹಾಗೂ ಅನೇಕ ಐಪಿಎಸ್‌ ಅಧಿಕಾರಿಗಳಿಗೆ ಈ ಲಸಿಕೆ ನೀಡಲಾಗಿದೆ’ ಎಂದು ಈ ಲಸಿಕೆಯ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿರುವ ಸಂಶೋಧನಾ ಸಂಸ್ಥೆಯಾದ ಕ್ಲಿನ್‌ಟ್ರ್ಯಾಕ್‌ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆಯ ಚೈತನ್ಯ ಅಡಿಕೆಸವಲು ತಿಳಿಸಿದರು.

ಸಚಿವರು ಅವರ ಮನೆಯವರು, ಕಾರ್ಮಿಕರು, ವಿದ್ಯಾರ್ಥಿಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಮತ್ತಿ ಇತರರಿಗೆ ಈ ಲಸಿಕೆ ನೀಡಿದ್ದನ್ನು ಕ್ಲಿನ್‌ಟ್ರ್ಯಾಕ್‌ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ರಾಜೇಶ್ ನಾಯ್ಡು ಖಚಿತಪಡಿಸಿದರು.

ADVERTISEMENT

‘ದೇಶದಾದ್ಯಂತ ಕೋವ್ಯಾಕ್ಸಿನ್‌ ಲಸಿಕೆಯ ಪ್ರಯೋಗ ನಡೆಯುತ್ತಿದೆ. ಭಾರಿ ಸಂಖ್ಯೆಯಲ್ಲಿ ಜನರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು’ ಎಂದು ಡಾ. ನಾಯ್ಡು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ನಿಗದಿಪಡಿಸಿರುವ ಗುರಿಯ ಪ್ರಕಾರ ಲಸಿಕೆಯ ಎರಡನೇ ಡೋಸ್‌ ಅನ್ನು ಇದೇ 30ರಿಂದ ದೇಶದಾದ್ಯಂತ 26 ಸ್ಥಳಗಳಲ್ಲಿ ನೀಡಲು ಸಿದ್ಧತೆ ನಡೆದಿದೆ. 26 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಇದನ್ನು ಪಡೆಯಲಿದ್ದಾರೆ. ಮೂರನೇ ಹಂತದ ಪ್ರಯೋಗದ ಮೊದಲ ಡೋಸ್‌ ಅನ್ನು ಡಿ.1ರಂದು ನೀಡಲಾಗಿದೆ.

ಬೆಂಗಳೂರಿನಲ್ಲಿ ಲಸಿಕೆ ಪ್ರಯೋಗಕ್ಕೆ ನಗರದ ನಿವಾಸಿಗಳಿಂದ ಅಷ್ಟೇನೂ ಸ್ಪಂದನೆ ಸಿಕ್ಕಿಲ್ಲ. ‘1500ಕ್ಕೂ ಸ್ವಯಂಸೇವಕರು ಮೊದಲ ವಾರದಲ್ಲಿ ಈ ಲಸಿಕೆ ಪಡೆಯಲು ನೋಂದಣಿ ಮಾಡಿಸಿದ್ದು ನೋಡಿ, ಈ ನಗರದಲ್ಲಿ ಲಸಿಕೆ ಪಡೆಯಲು ಜನ ಉತ್ಸಾಹದಿಂದ ಮುಂದೆ ಬರುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಲಸಿಕೆ ಪಡೆದವರ ಸಂಖ್ಯೆ ತೀರಾ ಕಡಿಮೆ ಇತ್ತು’ ಎಂದು ಡಾ. ನಾಯ್ಡು ತಿಳಿಸಿದರು.

ವೈದೇಹಿ ಇವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಕೇಂದ್ರದಲ್ಲಿ (ವಿಐಎಂಆರ್‌ಸಿ) ನಡೆದ ಈ ಲಸಿಕೆಯ ಪ್ರಯೋಗದಲ್ಲಿ ತೊಡಗಿಸಿಕೊಂಡ ಸಂಶೋಧಕರ ಪ್ರಕಾರ ಕೇವಲ 262 ಸ್ವಯಂಸೇವಕರು ಮಾತ್ರ ಲಸಿಕೆ ಪಡೆಯಲು ಇದುವರೆಗೆ ಮುಂದೆ ಬಂದಿದ್ದಾರೆ.

ವೈದೇಹಿ ಸಂಸ್ಥೆಯಲ್ಲಿ ನಡೆದಿದ್ದ ಲಸಿಕೆ ಪ್ರಯೋಗಕ್ಕೆ ಹೊರ ರಾಜ್ಯದವರೂ ಸೇರಿದಂತೆ 800 ಮಂದಿ ಹೆಸರು ನೋಂದಾಯಿಸಿದ್ದರು. ಯಾರೆಲ್ಲ ಸಚಿವರಿಗೆ ಹಾಗೂ ಐಪಿಎಸ್‌ ಅಧಿಕಾರಿಗಳಿಗೆ ಲಸಿಕೆ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಸಂಸ್ಥೆ ನಿರಾಕರಿಸಿದೆ.

‘ಈ ಲಸಿಕೆ ಪಡೆದವರ ಹೆಸರನ್ನು ಗೌಪ್ಯವಾಗಿಡಲಾಗಿದೆ. ಯಾರೆಲ್ಲ ಲಸಿಕೆ ಪಡೆದಿದ್ದಾರೆ ಎಂಬ ಪಟ್ಟಿ ನಮ್ಮ ಸಂಸ್ಥೆಗೂ ಸಿಕ್ಕಿಲ್ಲ’ ವಿಐಎಂಆರ್‌ಸಿ ನಿರ್ದೇಶಕ ಡಾ.ಕೆ.ಎಂ.ಶ್ರೀನಿವಾಸ ಮೂರ್ತಿ ತಿಳಿಸಿದರು.

‘ಕೊವ್ಯಾಕ್ಸಿನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐಸಿಎಂಆರ್‌ ಇತ್ತೀಚೆಗೆ ಪ್ರಕಟಿಸಿರುವ ದತ್ತಾಂಶಗಳ ಪ್ರಕಾರ ಇದು ದೇಹದಲ್ಲಿ ಪ್ರತಿರೋಧ ಶಕ್ತಿ ಹೆಚ್ಚಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಕೋವ್ಯಾಕ್ಸಿನ್‌ ಸಂಗ್ರಹಕ್ಕೆ ಇತರ ಲಸಿಕೆಗಳಂತೆ ಡೀಪ್‌ಫ್ರೀಜರ್‌ಗಳ ಅಗತ್ಯ ಇಲ್ಲ. ಈ ಲಸಿಕೆಯನ್ನು 3ಡಿಗ್ರಿಯಿಂದ 8 ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶದಲ್ಲೂ ಸಂಗ್ರಹಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.