ADVERTISEMENT

ಕೊರೊನಾ ಹೆಚ್ಚಳ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಾಳೆ- ಡಾ. ಸುಧಾಕರ್ 

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 7:52 IST
Last Updated 28 ಮಾರ್ಚ್ 2021, 7:52 IST
   

ಬೆಂಗಳೂರು: ‌'ರಾಜ್ಯದಲ್ಲಿ ಕೊರೊನಾ ಹೆಚ್ಚಳ ಆಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸುತ್ತೇವೆ. ಗೃಹ ಸಚಿವರು, ಕಂದಾಯ ಸಚಿವರು, ಶಿಕ್ಷಣ ಸಚಿವರು ಚರ್ಚೆ ಮಾಡುತ್ತೇವೆ' ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, 'ನಾಗ್ಪುರದಲ್ಲಿ ಲಾಕ್ ಡೌನ್ ಮಾಡಿರುವುದನ್ನು ನೋಡಿದ್ದೇವೆ. ಮಹಾರಾಷ್ಟ್ರದಲ್ಲೂ ಲಾಕ್ ಡೌನ್, ಸೀಲ್ ಡೌನ್ ಗಮನಿಸಿದ್ದೇವೆ. ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸುತ್ತೇವೆ ಎಂದರು.

'ಈ ಶೈಕ್ಷಣಿಕ ವರ್ಷ 1ರಿಂದ 9ರ ವರೆಗೆ ಎಲ್ಲರನ್ನೂ ತೇರ್ಗಡೆ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಪರೀಕ್ಷೆ ಮಾಡದೇ ತೇರ್ಗಡೆ ಮಾಡುವುದರ ಬಗ್ಗೆ ಗೊತ್ತಿಲ್ಲ. ಶಿಕ್ಷಣ ಸಚಿವರ ಜೊತೆ ಚರ್ಚೆ ಮಾಡಿ ಮಾತಾಡುತ್ತೇನೆ' ಎಂದರು.

ADVERTISEMENT

'ನಾಲ್ಕು ವಾರಗಳಿಂದ 300 ಕೊರೊನಾ ಕೇಸ್ ಬರುತಿತ್ತು, ಈಗ ಮೂರು ಸಾವಿರ ಬರುತ್ತಿದೆ. ಈಗ ತೆಗೆದುಕೊಂಡಿರುವ ಕ್ರಮಗಳು ಸಾಕಾಗಲ್ಲ. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ, ಬೆಂಗಳೂರಿಗೆ ಬರುವವರ ಬಗ್ಗೆ _ತೀವ್ರ ನಿಗಾ ಇಡಬೇಕಿದೆ. ಈ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿಯ ಗಮನಕ್ಕೆ ತಂದು ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದರು.

'ಮುಂದಿನ 7 ರಿಂದ 8 ವಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ತಾಂತ್ರಿಕ ಸಲಹಾ ಸಮಿತಿಯಿಂದಲೂ ವರದಿ ಬಂದಿದೆ. ಗಡಿ ಬಂದ್ ಮಾಡಬಾರದು ಎಂದು ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆ ಇದೆ, ಆದರೆ, ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತೇವೆ. ರಾಜ್ಯಕ್ಕೆ ತೀವ್ರತೆ ಇರುವ ವೈರಾಣು ಬಂದಿಲ್ಲ, ಆದರೆ ತೀವ್ರವಾಗಿ ಹರಡುವ ವೈರಾಣು ಬಂದಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.