ADVERTISEMENT

ಕೋವಿಡ್‌ನಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ ತಲಾ ₹50,000: ಸರ್ಕಾರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 18:32 IST
Last Updated 28 ಸೆಪ್ಟೆಂಬರ್ 2021, 18:32 IST
   

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೂ ತಲಾ ₹ 50,000 ಪರಿಹಾರ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪರಿಷ್ಕೃತ ಆದೇಶದ ಪ್ರಕಾರ, ಬಿಪಿಎಲ್‌ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದರೆ ಒಂದು ಪ್ರಕರಣದಲ್ಲಿ ₹ 1.5 ಲಕ್ಷ ಪರಿಹಾರ ದೊರೆ ಯಲಿದೆ. ಉಳಿದ ಪ್ರಕರಣಗಳಲ್ಲಿ ತಲಾ ₹ 50,000 ನೀಡಲಾಗುತ್ತದೆ. ಬಡತನ ರೇಖೆಗಿಂತ ಮೇಲಿರುವ (ಎಪಿಎಲ್‌) ಕುಟುಂಬಗಳಲ್ಲಿ ಎಲ್ಲ ಪ್ರಕರಣಗಳಿಗೂ ತಲಾ ₹ 50,000ದಂತೆ ಪರಿಹಾರ ವಿತರಿಸಲಾಗುತ್ತದೆ.

ಬಿಪಿಎಲ್‌ ಕುಟುಂಬಗಳಲ್ಲಿ ಕೋವಿಡ್‌ ಸೋಂಕಿನಿಂದ ಮೃತರಾದವರ ಪೈಕಿ ಪ್ರತಿ ಕುಟುಂಬಕ್ಕೆ ತಲಾ ಒಂದು ಪ್ರಕರಣದಲ್ಲಿ ₹ 1 ಲಕ್ಷ ಪರಿಹಾರವನ್ನು ‘ಸಂಧ್ಯಾ ಸುರಕ್ಷಾ ಯೋಜನೆ’ ಅಡಿಯಲ್ಲಿ ವಿತರಿಸಲು ರಾಜ್ಯ ಸರ್ಕಾರ ಸೆಪ್ಟೆಂಬರ್‌ 23ರಂದು
ಆದೇಶ ಹೊರಡಿಸಿತ್ತು. ಆದರೆ, ಕೋವಿಡ್‌ನಿಂದ ಸಂಭವಿಸಿದ ಸಾವಿನ ಎಲ್ಲ ಪ್ರಕರಣಗಳಲ್ಲೂ ಪರಿಹಾರ ವಿತರಿಸುವುದಾಗಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದ ಅನುಸಾರ ಮಂಗಳವಾರ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.

ADVERTISEMENT

ಬಿಪಿಎಲ್‌ ಕುಟುಂಬಗಳಲ್ಲಿ ಕೋವಿಡ್‌ನಿಂದ ಸಂಭವಿಸಿರುವ ಸಾವುಗಳಲ್ಲಿ ತಲಾ ಒಂದು ಪ್ರಕರಣದಲ್ಲಿ ₹ 1 ಲಕ್ಷ ಪರಿಹಾರ ವಿತರಿಸುವ ಸೆ.23ರ ಕಂದಾಯ ಇಲಾಖೆಯ ಆದೇಶವನ್ನು ಮಂಗಳವಾರ ಸಂಜೆಹಿಂಪಡೆಯಲಾಗಿತ್ತು. ಬಳಿಕ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪರಿಹಾರ ವಿತರಣೆಯ ಪ್ರಕ್ರಿಯೆ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.