ADVERTISEMENT

ಮದುವೆ, ಶವಸಂಸ್ಕಾರಕ್ಕೆ ಗರಿಷ್ಠ 500 ಜನಕ್ಕೆ ಅವಕಾಶ

ಅಬ್ಬರ ಕಡಿಮೆಯಾದರೂ ಎಚ್ಚರಿಕೆ ಅಗತ್ಯ: ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 20:21 IST
Last Updated 3 ಫೆಬ್ರುವರಿ 2021, 20:21 IST
ವೈರಸ್‌
ವೈರಸ್‌   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಅಬ್ಬರ ಕಡಿಮೆಯಾಗಿದ್ದರೂ ಸೋಂಕು ಹರಡುವ ಅಪಾಯ ಇನ್ನೂ ಇರುವುದರಿಂದ ನಿರ್ದಿಷ್ಟ ಸಂದರ್ಭಗಳಲ್ಲಿ ಜನರು ಗುಂಪು ಸೇರುವುದಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಿ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

ಮಾಸ್ಕ್ ಧರಿಸುವುದು, ಭೌತಿಕ ಅಂತರ ಕಾಪಾಡುವುದು (ಕನಿಷ್ಠ 1 ಮೀಟರ್), ಸ್ಯಾನಿಟೈಸರ್‌ ಬಳಕೆ, ಸೋಪು ಹಾಗೂ ನೀರಿನಿಂದ ಕೈಗಳನ್ನು ಶುಚಿಗೊಳಿಸುವುದು, ಥರ್ಮಲ್ ಸ್ಕ್ರೀನಿಂಗ್, ಜ್ವರ ಹಾಗೂ ಸೋಂಕಿನ ಲಕ್ಷಣಗಳಿರುವವರನ್ನು ಪರೀಕ್ಷೆಗೆ ಒಳಪಡಿಸುವುದು ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಮುಂದುವರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮದುವೆ, ಜನ್ಮ ದಿನಾಚರಣೆ, ಮರಣ, ಶವ ಸಂಸ್ಕಾರ ಸಂದರ್ಭಗಳಲ್ಲಿ ಗರಿಷ್ಠ 500 ಜನರು ಭಾಗವಹಿಸಬಹುದು. ಕಚೇರಿಗಳಲ್ಲಿ ಎಲ್ಲರೂ ಕೆಲಸಕ್ಕೆ ಹಾಜರಾಗಬಹುದು. ಮನೆಯಿಂದಲೇ ಕೆಲಸ ನಿರ್ವಹಿಸುವ ವ್ಯವಸ್ಥೆ ಅಥವಾ ಪಾಳಿಗಳಲ್ಲಿ ಕೆಲಸ ನಿರ್ವಹಣೆಗೂ ಅವಕಾಶ ನೀಡಬಹುದು. ಕೈಗಾರಿಕಾ ಪ್ರದೇಶಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿಯೂ ಸಿಬ್ಬಂದಿಯ ಸಂಪೂರ್ಣ ಹಾಜರಾತಿ ಅಥವಾ ಪಾಳಿಗಳಲ್ಲಿ ಕೆಲಸ ನಿರ್ವಹಣೆ ಮುಂದುವರಿಸಲು ಅವಕಾಶವಿದೆ.

ADVERTISEMENT

ಮೆಟ್ರೊ ರೈಲುಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಿಗದಿಪಡಿಸಿದ ಪ್ರಯಾಣಿಕರ ಸಂಖ್ಯೆ ಮೀರಲು ಅವಕಾಶ ಇಲ್ಲ. ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರ ಗರಿಷ್ಠ ಸಂಖ್ಯೆ ಮೀರಬಾರದು. ಅಂಗಡಿ, ಮಾಲ್‌, ಮಲ್ಟಿಪ್ಲೆಕ್ಸ್ ಹಾಗೂ ಮನರಂಜನಾ ಪಾರ್ಕ್‌ಗಳ ಒಳಗೆ ಜನರು ಗುಂಪು ಸೇರದಂತೆ ಕ್ರಮ ವಹಿಸಬೇಕು. ಈ ಕಾರಣಕ್ಕೆ ಸಾರ್ವಜನಿಕರ ಪ್ರವೇಶ ನಿಯಂತ್ರಿಸಬೇಕು. ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಆಚರಣೆಗಳನ್ನೂ ದೂರವಿಡಬೇಕು.

ಯೋಗ ಕೇಂದ್ರಗಳು ಹಾಗೂ ಜಿಮ್‌ಗಳಲ್ಲಿಯೂ ಹೆಚ್ಚು ಜನರು ಸೇರುವುದನ್ನು ನಿಯಂತ್ರಿಸಲು ಪಾಳಿ ವ್ಯವಸ್ಥೆ ಮಾಡಬೇಕು. ಶಾಲೆಗಳು ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಎಸ್‌ಒಪಿ ಅನುಸರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಸೇರುವುದನ್ನು ತಪ್ಪಿಸಲು, ಸಾಮಾನ್ಯವಾಗಿ ವಿವಿಧ ಆಚರಣೆಗಳನ್ನು ವರ್ಚುವಲ್ ಮೂಲಕ ಕೈಗೊಳ್ಳುವಂತೆ ಅಥವಾ ಗಾಳಿ,ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ ನಡೆಸಬೇಕು ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.