ADVERTISEMENT

ಕೋವಿಡ್ ಸಹಾಯವಾಣಿಯಿಂದ ಸ್ಪಂದನೆ ವಿಳಂಬ

ಶೀಘ್ರವಾಗಿ ಕರೆ ಸ್ವೀಕರಿಸಲು ಸಾರ್ವಜನಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಮೇ 2021, 19:30 IST
Last Updated 7 ಮೇ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ನೀವು ಸರತಿಯಲ್ಲಿದ್ದೀರಿ, ದಯವಿಟ್ಟು ಸಂಪರ್ಕ ಕಡಿತಗೊಳಿಸಬೇಡಿ, ಶೀಘ್ರದ‌ಲ್ಲೇ ನಮ್ಮ ಸಿಬ್ಬಂದಿ ಕರೆ ಸ್ವೀಕರಿಸಲಿದ್ದಾರೆ’.

ಇದು,ಕೋವಿಡ್‌ಗೆ ಸಂಬಂಧಿಸಿದಂತೆ ಜನರಿಗೆ ನೆರವು ಒದಗಿಸಲು ಬಿಬಿಎಂಪಿಯು ಬೆಸ್ಕಾಂ ಸಹಯೋಗದಲ್ಲಿ ಆರಂಭಿಸಿರುವಏಕೀಕೃತ ಸಹಾಯವಾಣಿ–1912ಕ್ಕೆ ಕರೆ ಮಾಡಿದಾಗ ಕೇಳಿ ಬರುವ ಸಾಲುಗಳು.

‘ಕೋವಿಡ್‌ ಚಿಕಿತ್ಸೆಗೆ ಹಾಸಿಗೆ ಅಗತ್ಯ ಇರುವವರು ಈ ಸಹಾಯವಾಣಿ ಮೂಲಕ ಸಂಪರ್ಕ ಮಾಡಬಹುದು ಎಂದು ಪಾಲಿಕೆ ತಿಳಿಸಿತ್ತು. ‘ಸಹಾಯವಾಣಿಗೆ ಯಾವಾಗ ಕರೆ ಮಾಡಿದರೂ ಅಲ್ಲಿನ ಸಿಬ್ಬಂದಿ ಶೀಘ್ರವಾಗಿ ಸಂಪರ್ಕಕ್ಕೆ ಬರುವುದಿಲ್ಲ. ಕನಿಷ್ಠ 15ರಿಂದ 18 ನಿಮಿಷಗಳವರೆಗೆ ನಿರಂತರವಾಗಿ ಪ್ರಯತ್ನಿಸಿದಾಗ ಅಪರೂಪಕ್ಕೆ ಸ್ಪಂದಿಸುತ್ತಾರೆ’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ADVERTISEMENT

‘ಹಾಸಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಬಿಬಿಎಂಪಿ ಸಿಬ್ಬಂದಿ ಭರವಸೆ ನೀಡುತ್ತಾರೆ. ಆದರೆ, ದಿನವಿಡೀ ಕಾದರೂ ಹಾಸಿಗೆ ಲಭಿಸುತ್ತಿಲ್ಲ’ ಎಂದೂ ಕೋವಿಡ್‌ ರೋಗಿಗಳ ಕುಟುಂಬಸ್ಥರು ದೂರುತ್ತಿದ್ದಾರೆ.

‘ನನ್ನ ಸಂಬಂಧಿಯೊಬ್ಬರಿಗೆ ತುರ್ತಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಬೇಕಿತ್ತು. ಇದಕ್ಕಾಗಿ ಸಹಾಯವಾಣಿಗೆ ಕರೆ ಮಾಡಿದೆ. 18 ನಿಮಿಷದವರೆಗೆ ಕರೆ ಸ್ವೀಕೃತಿಯಾಗಲಿಲ್ಲ. ಆ ನಂತರ ಕರೆ ಸ್ವೀಕರಿಸಿದವರು ಹಾಸಿಗೆ ಲಭ್ಯತೆ ವಿವರ ನೀಡುವುದಾಗಿ ತಿಳಿಸಿದರು. ಕರೆಯ ಸಂಪರ್ಕ ಕಡಿತಗೊಂಡಿತು. ಮತ್ತೆ ಕರೆ ಮಾಡಿದರೆ ‘ಸರತಿಯಲ್ಲಿದ್ದೀರಿ’ ಎಂಬ ಸಾಲುಗಳು ಬರುತ್ತವೆ. ಸಹಾಯವಾಣಿಯಲ್ಲಿ ಮಾಹಿತಿ ಪಡೆಯಲು ಪರದಾಡಬೇಕಾಗಿದೆ’ ಎಂದು ವಿದ್ಯಾರಣ್ಯಪುರದ ನಿವಾಸಿ ಗೋಪಾಲ್‌ ದೂರಿದರು.

‘ಸಹಾಯವಾಣಿ ಇದೆ ಎಂಬ ಕಾರಣಕ್ಕೆ ಈ ಪರಿಸ್ಥಿತಿಯಲ್ಲಿ ಕೊಂಚ ಧೈರ್ಯವಿದೆ. ಆದರೆ, ಮಾಹಿತಿಗಾಗಿ ದೀರ್ಘಕಾಲದವರೆಗೆ ಕಾಯುವ ತಾಳ್ಮೆ ಎಲ್ಲರಿಗೂ ಇಲ್ಲ. ರೋಗಿಯ ಜೀವ ಉಳಿಸಿಕೊಳ್ಳುವ ಪರದಾಟದಲ್ಲೇ ಪ್ರತಿಯೊಬ್ಬರೂ ಕರೆ ಮಾಡುತ್ತಾರೆ. ಆದರೆ, ಸಹಾಯವಾಣಿಯಿಂದ ಸ್ಪಂದನೆ ಸಾಲದು’ ಎಂದು ಕೆ.ಆರ್.ಪುರದ ನಿವಾಸಿ ಹರೀಶ್‌ ಬೇಸರ ವ್ಯಕ್ತಪಡಿಸಿದರು.

‘ತುರ್ತಾಗಿ ಆಂಬುಲೆನ್ಸ್‌ ಹಾಗೂ ಹಾಸಿಗೆ ಲಭ್ಯತೆ ಮಾಹಿತಿ ಸಿಕ್ಕರೆ, ರೋಗಿಯನ್ನು ಉಳಿಸಿಕೊಳ್ಳಬಹುದು. ಶೀಘ್ರ ಸ್ಪಂದನೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು. ಕರೆ ಮಾಡಿದ ಕೆಲವೇ ನಿಮಿಷದಲ್ಲಿ ಸ್ಪಂದನೆ ಸಿಗುವ ವ್ಯವಸ್ಥೆಯಾದರೆ ಸಾರ್ವಜನಿಕರಿಗೆ ಅನುಕೂಲ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.