ADVERTISEMENT

ಕೋವಿಡ್‌ ವರದಿ: ಗಡಿಯಲ್ಲಿ ವಾಗ್ವಾದ– ವಾಹನ ದಟ್ಟಣೆ

ಚೆಕ್‌ಪೋಸ್ಟ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ವಾಹನ ಚಾಲಕರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 19:59 IST
Last Updated 24 ಫೆಬ್ರುವರಿ 2021, 19:59 IST
ಕೋವಿಡ್‌ ಪರೀಕ್ಷೆ ವರದಿ ವಿಚಾರವಾಗಿ ಬಾವಲಿ ಚೆಕ್‌ಪೋಸ್ಟ್‌ ಬಂದ್‌ ಮಾಡಿದ್ದರಿಂದ‌ ಸಾಲುಗಟ್ಟಿ ನಿಂತಿದ್ದ ವಾಹನಗಳು
ಕೋವಿಡ್‌ ಪರೀಕ್ಷೆ ವರದಿ ವಿಚಾರವಾಗಿ ಬಾವಲಿ ಚೆಕ್‌ಪೋಸ್ಟ್‌ ಬಂದ್‌ ಮಾಡಿದ್ದರಿಂದ‌ ಸಾಲುಗಟ್ಟಿ ನಿಂತಿದ್ದ ವಾಹನಗಳು   

ಮೈಸೂರು: ಕೋವಿಡ್‌ ನೆಗೆಟಿವ್ ವರದಿ ವಿಚಾರವಾಗಿ, ಕೇರಳ–ಕರ್ನಾಟಕ ಗಡಿ ಪ್ರದೇಶವಾದ ಮೈಸೂರು ಜಿಲ್ಲೆಯ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಕೇರಳದ ವಾಹನ ಚಾಲಕರು, ಪ್ರಯಾಣಿಕರು ಹಾಗೂ ರಾಜ್ಯದ ಅಧಿಕಾರಿಗಳ ನಡುವೆ ಬುಧವಾರ ಮಾತಿನ ಚಕಮಕಿ ನಡೆದಿದೆ.

ಆರ್‌ಟಿ–ಪಿಸಿಆರ್‌ ವರದಿ‌ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಕೇರಳದ ವಾಹನಗಳನ್ನು ತಡೆಹಿಡಿದರು. ಇದಕ್ಕೆ ಪ್ರತಿಯಾಗಿ ಕೇರಳದವರು ಕೂಡ ಕರ್ನಾಟಕದ ವಾಹನಗಳನ್ನು ತಮ್ಮ ರಾಜ್ಯದೊಳಗೆ ಬಿಡಲಿಲ್ಲ. ಎರಡೂ ಕಡೆ ವಾಹನ ದಟ್ಟಣೆ ನಿರ್ಮಾಣವಾಯಿತು. ಸುಮಾರು ಅರ್ಧ ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ನೆಗೆಟಿವ್‌ ವರದಿ ಕೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಚಾಲಕರು, ‘ಕೇರಳ ಸರ್ಕಾರ ಯಾವುದೇ ಸೂಚನೆ ನೀಡಿಲ್ಲ. ಕರ್ನಾಟಕ ರಾಜ್ಯ ಪ್ರವೇಶಕ್ಕೆ ನಮಗೆ ಅವಕಾಶ ನೀಡದಿದ್ದರೆ, ನಾವು ಕೂಡ ಕೇರಳ ಪ್ರವೇಶಿಸಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು.

ADVERTISEMENT

‘ಪ್ರತಿಸಲ, ಎರಡು ಸಾವಿರ ರೂಪಾಯಿ ಕೊಟ್ಟು ಪರೀಕ್ಷೆ ಮಾಡಿಸಿಕೊಂಡು ಬರಲು ಸಾಧ್ಯವೇ? ಬೇಕಿದ್ದರೆ ನಮ್ಮ (ಕೇರಳ) ಸರ್ಕಾರಕ್ಕೆ ಪತ್ರ ಬರೆಯಿರಿ. ಅವರು ಉಚಿತವಾಗಿ ಪರೀಕ್ಷೆ ಮಾಡುವುದಾಗಿ ಹೇಳಿದ ಮೇಲೆ, ಕಡ್ಡಾಯ ಮಾಡಿ’ ಎಂದರು.

ಬಾವಲಿ ಚೆಕ್‌ಪೋಸ್ಟ್‌ಗೆ ತೆರಳಿದ‌ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ವಯನಾಡು ಪೊಲೀಸ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸ್ಥಳದಲ್ಲೇ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ರ‍್ಯಾಪಿಡ್‌ ಟೆಸ್ಟ್‌ ಕೂಡ ಮಾಡಲಾಗುತ್ತಿದೆ.

‘ಗಡಿಯಲ್ಲಿ ನಾವು ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿದರೂ ಫಲಿತಾಂಶ ಬರಲು 72 ಗಂಟೆ ಹಿಡಿಯುತ್ತದೆ. ತರಕಾರಿ ಸಾಗಾಟ ಮಾಡುವವರು, ಪ್ರಯಾಣಿಕರು ಅಷ್ಟು ಹೊತ್ತು ಕಾಯುವುದು ಕಷ್ಟ. ಜೊತೆಗೆ ವಾಹನ ದಟ್ಟಣೆ ಹೆಚ್ಚುತ್ತದೆ. ಹೀಗಾಗಿ, ಥರ್ಮಲ್‌ ಸ್ಕ್ರೀನಿಂಗ್ ಮಾಡಿ ಸಮಸ್ಯೆ ಇಲ್ಲದಿದ್ದರೆ ಒಳಗೆ ಬಿಡುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೊಡಗಿನ ಮಾಕುಟ್ಟ ಹಾಗೂ ಕುಟ್ಟ ಚೆಕ್‌ಪೋಸ್ಟ್‌ಗಳಲ್ಲಿ ಕೂಡ ಕೋವಿಡ್‌ ನೆಗೆಟಿವ್‌ ವರದಿ ತಂದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದು, ವರದಿ ಇಲ್ಲದೇ ಬಂದವರು ಗಡಿಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿದರು. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ವಾಹನಗಳುಸಾಲುಗಟ್ಟಿ ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.