ADVERTISEMENT

ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಸೂಚನೆ: ಸುತ್ತೋಲೆ ಹೊರಡಿಸಿದ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 11:30 IST
Last Updated 31 ಜುಲೈ 2021, 11:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನೆರೆಯ ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರು ಲಸಿಕೆ ಪಡೆದಿದ್ದರೂ ಪ್ರಯಾಣಕ್ಕೂ ಮೊದಲಿನ 72 ಗಂಟೆಗಳ ಅವಧಿಯಲ್ಲಿ ನಡೆಸಲಾದ ಕೋವಿಡ್ ಆರ್‌ಟಿ–ಪಿಸಿಆರ್‌ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಪಡೆದುಕೊಂಡಿದೆ. ರಾಜ್ಯ ಪ್ರವೇಶಿಸುವವರಿಗೆ ಗಡಿಯಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರವಿದ್ದರೂ ಸದ್ಯ ಅವಕಾಶ ನೀಡಲಾಗುತ್ತಿತ್ತು. ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಹಾಗೂ ಲಸಿಕಾ ಪ್ರಮಾಣ ಪತ್ರ ಹೊಂದಿರದವರ ಮಾದರಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಇದರಿಂದಾಗಿ ರಾಜ್ಯದಲ್ಲಿಯೂ ‍ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಳ್ಳುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಸಿದ್ದರು. ಹೀಗಾಗಿ, ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದಿದ್ದರೂ ಕಡ್ಡಾಯವಾಗಿ ಸೋಂಕಿತರಾಗಿರದ ಬಗ್ಗೆ ವರದಿ ಹೊಂದಿರಬೇಕು. ಅದು 72 ಗಂಟೆಗಳು ಮೀರಿರಬಾರದು ಎಂದು ತಿಳಿಸಲಾಗಿದೆ.

ವಿಮಾನ, ರೈಲು, ರಸ್ತೆ ಮಾರ್ಗದಲ್ಲಿ ಕರ್ನಾಟಕಕ್ಕೆ ಬರುವವರು ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕು. ಕೇರಳ ಹಾಗೂ ಮಹಾರಾಷ್ಟ್ರದಿಂದ ಹೊರಡುವ ಎಲ್ಲ ವಿಮಾನಗಳಿಗೂ ಅನ್ವಯವಾಗುತ್ತದೆ. ಆರ್‌ಟಿ–ಪಿಸಿಆರ್ ನೆಗೆಟಿವ್ ವರದಿ ಹೊಂದಿರುವವರಿಗೆ ಮಾತ್ರ ವಿಮಾನಯಾನ ಸಂಸ್ಥೆಯವರು ಬೋರ್ಡಿಗ್ ಪಾಸ್ ನೀಡಬೇಕು. ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ–ವ್ಯವಹಾರ ಸೇರಿದಂತೆ ಇತರ ಕಾರಣಗಳಿಗೆ ದೈನಂದಿನ ಭೇಟಿ ನೀಡುವವರು ಪ್ರತಿ 15 ದಿನಗಳಿಗೆ ಒಮ್ಮೆ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.