ADVERTISEMENT

ಕಷ್ಟ ನುಂಗಿಕೊಂಡು ಧೈರ್ಯ ತುಂಬುತ್ತೇವೆ: ಕೋವಿಡ್‌ ಶುಶ್ರೂಷಕರ ಅಂತರಂಗ

​ಪ್ರಜಾವಾಣಿ ವಾರ್ತೆ
Published 5 ಮೇ 2021, 4:00 IST
Last Updated 5 ಮೇ 2021, 4:00 IST
   

ಬೆಂಗಳೂರು: ‘ಇಡೀ ದಿನ ಆಸ್ಪತ್ರೆಯಲ್ಲಿಯೇ ಇದ್ದು, ಕೋವಿಡ್‌ ಪೀಡಿತರಿಗೆ ಸೇವೆ ಒದಗಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೊಂದು ವರ್ಷದಿಂದ ರಜೆ ಪಡೆಯದೆಯೇ ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ರಾತ್ರಿ 3 ಗಂಟೆ ಮಾತ್ರ ನಿದ್ದೆ ಮಾಡಲು ಸಾಧ್ಯವಾಗುತ್ತಿದೆ. ನಮಗೆ ಎಷ್ಟೇ ಕಷ್ಟಗಳು ಎದುರಾದರೂ ಸೋಂಕಿತರಿಗೆ ಆರೈಕೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಂಡು, ಧೈರ್ಯ ತುಂಬುತ್ತಿದ್ದೇವೆ.’

‘ಕಳೆದ ವರ್ಷ ಕೋವಿಡ್‌ ಕಾಣಿಸಿಕೊಂಡ ಬಳಿಕ ಸರ್‌.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ಪ್ರಾರಂಭಿಸಲಾಯಿತು. ಹೆಚ್ಚಾಗಿ ವಿದೇಶದಿಂದ ಬಂದು ಸೋಂಕಿತರಾದವರು ಪ್ರಾರಂಭಿಕ ದಿನಗಳಲ್ಲಿ ದಾಖಲಾಗುತ್ತಿದ್ದರು. ಅವರು ಉನ್ನತ ದರ್ಜೆಯ ಸೇವೆಗಳನ್ನು ಬಯಸುತ್ತಿದ್ದರು. ರಾತ್ರಿ ಬಿರಿಯಾನಿ ತಂದುಕೊಟ್ಟ ಉದಾಹರಣೆಗಳು ಇವೆ. ಆದರೆ, ಹಾಸಿಗೆ ಸಮಸ್ಯೆ, ರೋಗಿಗಳ ದಟ್ಟಣೆ ಅಷ್ಟಾಗಿ ಇರುತ್ತಿರಲಿಲ್ಲ. ಎರಡನೇ ಅಲೆ ಕಾಣಿಸಿಕೊಂಡ ಬಳಿಕ ನಾವು ಸಂಪೂರ್ಣ ಹೈರಾಣಾಗಿದ್ದು, ವಾರದ ಎಲ್ಲ ದಿನಗಳು ಸೇವೆ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.’

‘ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಆಸ್ಪತ್ರೆಯಲ್ಲಿಯೇ ಇದ್ದು, ರೋಗಿಗಳನ್ನು ನೋಡಿಕೊಳ್ಳಬೇಕಾಗಿದೆ. ಮನೆಗೆ ಹೋದ ಬಳಿಕವೂ ದೂರವಾಣಿ ಕರೆಗಳು ಬರುವುದರಿಂದ ಸದಾ ರೋಗಿಗಳು ಹಾಗೂ ಆಸ್ಪತ್ರೆಯ ಬಗ್ಗೆಯೇ ಚಿಂತಿಸುತ್ತೇವೆ. ಈಗ ಆಸ್ಪತ್ರೆಗೆ ಬರುವ ರೋಗಿಗಳು ಗಂಭೀರವಾಗಿ ಅಸ್ವಸ್ಥರಾಗಿರುತ್ತಿದ್ದು, ಕೆಲವರ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿರುತ್ತದೆ. ಹೀಗಾಗಿ, ಸದಾ ಜಾಗೃತರಾಗಿ ಇರುವ ಜತೆಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಇದರಿಂದಾಗಿ ಊಟ–ತಿಂಡಿ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ.’

ADVERTISEMENT

‘ವ್ಯಕ್ತಿಯು ಬದುಕುಳಿಯದಿದ್ದಲ್ಲಿ ನಮ್ಮ ಬಳಿ ಕುಟುಂಬದ ಸದಸ್ಯರು ಗಲಾಟೆ ಮಾಡುತ್ತಾರೆ. ಕೆಲವರು ಹಲ್ಲೆಗೆ ಕೂಡ ಮುಂದಾಗುತ್ತಾರೆ. ಆಗ ಮನಸ್ಸಿಗೆ ಬೇಸರವಾಗುತ್ತದೆ. ರೋಗಿಯು ಚಿಕಿತ್ಸೆಗೆ ಫಲಿಸದೇ ಮೃತಪಟ್ಟಾಗ ನಮ್ಮ ಕಣ್ಣೀರ ಕಟ್ಟೆ ಕೂಡ ಒಡೆಯುತ್ತದೆ. ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್) ಧರಿಸಿ 12 ಗಂಟೆ ಸೇವೆ ಸಲ್ಲಿಸಬೇಕಾಗುತ್ತದೆ. ಕೆಲ ವೈದ್ಯರು, ಶುಶ್ರೂಷಕರು ಕೋವಿಡ್‌ ಪೀಡಿತರಾಗುತ್ತಿರುವುದರಿಂದ ಇರುವ ಸಿಬ್ಬಂದಿಯೇ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ. ನಮ್ಮ ವೈಯಕ್ತಿಕ ಆರೋಗ್ಯ ಸಂಪೂರ್ಣ ಕಡೆಗಣಿಸಿದ್ದು, ಮನೆ, ಕುಟುಂಬವನ್ನು ಮರೆಯುತ್ತಿದ್ದೇವೆ.’

* ಡಿ. ನವೀನ್‌ ರಾಜ್, ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.