ADVERTISEMENT

ಸ್ಮಶಾನಕ್ಕೆ ಜಾಗವಿಲ್ಲದ ಕಡೆ ಹೆಣ ರಸ್ತೆಯಲ್ಲಿ ಹಾಕಬೇಕಾ: ಸರ್ಕಾರಕ್ಕೆ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:32 IST
Last Updated 9 ಜೂನ್ 2022, 19:32 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸ್ಮಶಾನಕ್ಕೆ ಜಾಗ ಇಲ್ಲದ ಕಡೆ ಹೆಣಗಳನ್ನು ರಸ್ತೆಯಲ್ಲಿ ಹಾಕಬೇಕಾ’ ಎಂದು ರಾಜ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿರುವ ಹೈಕೋರ್ಟ್‌, ‘ಸ್ಮಶಾನಕ್ಕೆ ಜಾಗ ಒದಗಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಈಸರ್ಕಾರಕ್ಕೆ ನಾಚಿಕೆ ಆಗಬೇಕು.ಸರ್ಕಾರ ಮಾಡುವ ಕೆಲಸವನ್ನು ಕೋರ್ಟ್ ಮಾಡಬೇಕಾಗಿದೆ’ ಎಂದು ಕಿಡಿಕಾರಿದೆ.

ಈ ಸಂಬಂಧ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಕೋರ್ಟ್ ಆದೇಶ ಪಾಲನೆಯ ವಸ್ತುಸ್ಥಿತಿ ವರದಿ ಸಲ್ಲಿಸಲು ಕಾಲಾವಕಾಶ ಬೇಕು’ ಎಂದು ಕೋರಿದರು. ಇದಕ್ಕೆ ವ್ಯಗ್ರವಾದ ನ್ಯಾಯಪೀಠ, ‘ವಸ್ತುಸ್ಥಿತಿ ವರದಿ ಸಲ್ಲಿಸಲು ಇದೇನು ನಾಪತ್ತೆ ಪ್ರಕರಣವೇ, ಒಳ್ಳೆಯ ಕೆಲಸ ಮಾಡಿದರೆ ಜನ ಮೆಚ್ಚಿ ವೋಟು ಹಾಕುತ್ತಾರೆ. ಕಡೇ ಪಕ್ಷ ಇದೊ ಒಂದು ವೋಟು ಗಿಟ್ಟಿಸುವ ಕಾರ್ಯಕ್ರಮ ಎಂದು ಸರ್ಕಾರ ಪರಿಗಣಿಸಬೇಕಿತ್ತು ’ ಎಂದು ಸರ್ಕಾರವನ್ನು ಕುಟುಕಿತು.

ADVERTISEMENT

‘ನೀವು (ಸರ್ಕಾರ) ಭಂಡರಾದರೆ ನಾವು (ಕೋರ್ಟ್) ಜಗಭಂಡರು. ಕೋರ್ಟ್ ಆದೇಶ ಪಾಲನೆ ಮಾಡುವ ತನಕ ನಿಮ್ಮನ್ನು ಬಿಡುವುದಿಲ್ಲ. ಸ್ಮಶಾನಕ್ಕೆ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸುವ ಸಂಬಂಧ ಕೋರ್ಟ್ ಆದೇಶವನ್ನು 15 ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲನೆ ಮಾಡದೇ ಹೋದರೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಜೈಲಿಗೆ ಕಳಿಸಲಾಗುವುದು’ ಎಂದು ನ್ಯಾಯಪೀಠ ಕಠಿಣ ಎಚ್ಚರಿಕೆ ನೀಡಿತು.

‘ಸ್ಮಶಾನ ಇಲ್ಲದ ಗ್ರಾಮಗಳಿಗೆ ಆರು ತಿಂಗಳಲ್ಲಿಅಗತ್ಯ ಜಮೀನು ಒದಗಿಸುವಂತೆ 2019ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಮೂರು ವರ್ಷವಾದರೂ ಈ ಆದೇಶವನ್ನು ಪಾಲಿಸಿಲ್ಲ’ ಎಂದು ಅರ್ಜಿದಾರರು ಈ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.