ADVERTISEMENT

ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಗುರುತರ ಪ್ರಕರಣ ಬಾಕಿ

ತನಿಖೆ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 20:15 IST
Last Updated 4 ಡಿಸೆಂಬರ್ 2018, 20:15 IST
   

ನವದೆಹಲಿ: ಕರ್ನಾಟಕದ ಹಾಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಹಲವು ಕ್ರಿಮಿನಲ್‌ ಪ್ರಕರಣಗಳ ತನಿಖೆ ಇನ್ನೂ ಬಾಕಿ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಸಲ್ಲಿಸಲಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಚ್‌.ಡಿ. ಕುಮಾರಸ್ವಾಮಿ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಇದರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿರುವ ಗುರುತರ ಅಪರಾಧ ಪ್ರಕರಣಗಳೂ ಇವೆ ಎಂದು ವರದಿ ತಿಳಿಸಿದೆ.

ಬಿ.ಎಸ್‌. ಯಡಿಯೂರಪ್ಪ 18 ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಆರೋಪ ಸಾಬೀತಾದರೆ 14 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಇನ್ನುಳಿದ ನಾಲ್ಕು ಪ್ರಕರಣಗಳಲ್ಲಿ ಗರಿಷ್ಠ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ 9 ಪ್ರಕರಣಗಳ ತನಿಖೆ ಇನ್ನೂ ಬಾಕಿ ಇದೆ. ಆರೋಪ ಸಾಬೀತಾದರೆ ಎಂಟು ಪ್ರಕರಣಗಳಲ್ಲಿ ಜನಾರ್ದನ ರೆಡ್ಡಿ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗಬಹುದು.

ADVERTISEMENT

ರಾಜ್ಯದ ಹಲವು ಹಾಲಿ ಮತ್ತು ಮಾಜಿ ಶಾಸಕರ ವಿರುದ್ಧವೂ ಗುರುತರವಾದ 58 ಪ್ರಕರಣಗಳು ದಾಖಲಾಗಿದ್ದು, ತನಿಖೆ ಬಾಕಿ ಇದೆ. 9 ಹಾಲಿ ಶಾಸಕರ ವಿರುದ್ಧ 34 ಪ್ರಕರಣ ಮತ್ತು ಆರು ಮಾಜಿ ಶಾಸಕರ ವಿರುದ್ಧದ 24 ಪ್ರಕರಣಗಳ ತನಿಖೆ ನಡೆಯಬೇಕಾಗಿದೆ.

‘ಎಲ್ಲ ಪ್ರಕರಣಗಳ ತನಿಖೆ ಬಾಕಿ ಇದ್ದು, ಇನ್ನೂ ಅಂತಿಮ ವರದಿ ಸಲ್ಲಿಸಬೇಕಾಗಿದೆ’ ಎಂದು ಹಿರಿಯ ವಕೀಲರಾದ ವಿಜಯ್‌ ಹನ್ಸಾರಿಯಾ ಮತ್ತು ಸ್ನೇಹಾ ಕಲಿಟಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ವರದಿ ಸಲ್ಲಿಸಲು ಈ ಇಬ್ಬರನ್ನು ನ್ಯಾಯಾಲಯದ ಸಹಾಯಕರಾಗಿ (ಆಮಿಕಸ್‌ ಕ್ಯೂರಿ) ನೇಮಿಸಲಾಗಿತ್ತು.

ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಗಂಭೀರ ಕ್ರಿಮಿನಲ್‌ ಅಪರಾಧ ಪ್ರಕರಣಗಳ ಮಾಹಿತಿ ಕೋರಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.