ADVERTISEMENT

ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್‌ ವಿರುದ್ಧ 2 ಕ್ರಿಮಿನಲ್ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 22:11 IST
Last Updated 16 ನವೆಂಬರ್ 2019, 22:11 IST
ಅರುಣ್ ಕುಮಾರ್ ಪೂಜಾರ್
ಅರುಣ್ ಕುಮಾರ್ ಪೂಜಾರ್   

ಹಾವೇರಿ: ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ವಿರುದ್ಧ ₹ 15 ಲಕ್ಷ ವಂಚನೆ ಆರೋಪ (ಐಪಿಸಿ 420) ಸೇರಿದಂತೆ ಕಳೆದ 15 ದಿನಗಳಲ್ಲೇ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ತಮ್ಮ ಮಾಲೀಕತ್ವದ ಲಾರಿಯ ಮೇಲೆ ಈಗಾಗಲೇ ಸಾಲವಿದ್ದರೂ, ನಕಲಿ ದಾಖಲೆಗಳನ್ನು ಸೃಷ್ಟಿಸಿ ತುಂಗಭದ್ರಾ ಸಹಕಾರಿ ಬ್ಯಾಂಕ್‌ನ ಹರಿಹರ ಶಾಖೆಯಲ್ಲಿ ₹ 15 ಲಕ್ಷ ಸಾಲ ಪಡೆದ ಆರೋಪ ಅವರ ಮೇಲಿದೆ.

ಅರುಣ್ ವಿರುದ್ಧ ‘ಚೋಳ ಮಂಡಳಂ ಇನ್ವೆಸ್ಟ್‌ಮೆಂಟ್ ಆ್ಯಂಡ್ ಫೈನಾನ್ಸ್‌’ನ ಹಾವೇರಿ ಶಾಖೆ ವ್ಯವಸ್ಥಾಪಕ ಮೃತ್ಯುಂಜಯ ದಾವೆ ಹೂಡಿದ್ದರು. ಕೋರ್ಟ್ ಸೂಚನೆ ಮೇರೆಗೆ ಅರುಣ್ ಹಾಗೂ ತುಂಗಭದ್ರಾ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ರವಿ ವಿರುದ್ಧ ಹಾವೇರಿ ನಗರ ಪೊಲೀಸರು ನ.13ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ADVERTISEMENT

ಅತಿಕ್ರಮ ಪ್ರವೇಶ: ರಾಣೆಬೆನ್ನೂರಿನ ಗ್ರಾಸಿಂ ಕಂಪನಿ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿ, ಭದ್ರತಾ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸಿದ ಹಾಗೂ ಎರಡು ಉತ್ಪಾದನಾ ಘಟಕಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಿ ಕಂಪನಿಗೆ ನಷ್ಟ ಉಂಟು ಮಾಡಿದ ಆರೋಪವೂ ಅರುಣ್ ಮೇಲಿದೆ.

‘ಅರುಣ್ ನನ್ನ ಆಪ್ತ ಸಹಾಯಕನ ಮೊಬೈಲ್‌ಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದಾರೆ’ ಎಂದೂ ಆರೋಪಿಸಿ ಗ್ರಾಸಿಂ ಕಂಪನಿಯ ಅರುಣ್ ಕುಮಾರ್ ಮಿಶ್ರಾ ನ.4ರಂದು ಕುಮಾರಪಟ್ಟಣ ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಲು ಅರುಣ್ ಪೂಜಾರ್ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.