ADVERTISEMENT

ಶಿವರಾಮೇಗೌಡ ವಿರುದ್ಧ ಟೀಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:30 IST
Last Updated 17 ಅಕ್ಟೋಬರ್ 2018, 19:30 IST
ಎಲ್‌.ಆರ್‌.ಶಿವರಾಮೇಗೌಡರಿಗೆ ಟಿಕೆಟ್‌ ನೀಡಿರುವುದಕ್ಕೆ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಸಂದೇಶ
ಎಲ್‌.ಆರ್‌.ಶಿವರಾಮೇಗೌಡರಿಗೆ ಟಿಕೆಟ್‌ ನೀಡಿರುವುದಕ್ಕೆ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಸಂದೇಶ   

ಮಂಡ್ಯ: ಲೋಕಸಭೆ ಉಪಚುನಾವಣೆಯಲ್ಲಿ ನಾಗಮಂಗಲ ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ಅವರನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಈಗೇಕೆ ಟಿಕೆಟ್‌ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

‘ಪತ್ರಕರ್ತ ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಿವರಾಮೇಗೌಡ ವಿರುದ್ಧ ಗೌಡರು ಹೋರಾಟ ನಡೆಸಿದ್ದರು. ಬಾಯಿಗೆ ಬಟ್ಟೆ ಕಟ್ಟಿಕೊಂಡು, ತಲೆಯ ಮೇಲೆ ಗಂಗಾಧರಮೂರ್ತಿ ಭಾವಚಿತ್ರ ಹೊತ್ತು ಮೆರವಣಿಗೆ ನಡೆಸಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶಿವರಾಮೇಗೌಡರ ರೌಡಿ ರಾಜಕಾರಣಕ್ಕೆ ತೆರೆ ಎಳೆಯುವುದಾಗಿ ಘೋಷಣೆ ಮಾಡಿದ್ದರು. ಆದರೆ 20 ವರ್ಷಗಳ ನಂತರ ಅದೇ ಶಿವರಾಮೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಈಗ ಟಿಕೆಟ್‌ ಕೂಡ ಕೊಟ್ಟಿದ್ದಾರೆ' ಎಂದು ಆರೋಪಿಸಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.

ಲಕ್ಷ್ಮಿ ಪರ ಸಂದೇಶ: ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ರಾಜಕಾರಣಕ್ಕೆ ಪದಾರ್ಪಣೆ ಮಾಡಿದ ಲಕ್ಷ್ಮಿ ಅಶ್ವಿನ್‌ಗೌಡ ಅವರಿಗೆ ಎಚ್‌.ಡಿ.ದೇವೇಗೌಡರು ಮೋಸ ಮಾಡಿದ್ದಾರೆ ಎಂಬ ಬಗ್ಗೆಯೂ ಸಂದೇಶಗಳು ಹರಿದಾಡುತ್ತಿವೆ.

ADVERTISEMENT

ಇದಕ್ಕೆ ಫೇಸ್‌ಬುಕ್‌ನಲ್ಲೇ ಸ್ಪಷ್ಟನೆ ನೀಡಿರುವ ಲಕ್ಷ್ಮಿ ಅಶ್ವಿನ್‌ಗೌಡ ‘ವ್ಯಕ್ತಿಯಿಂದ ಪಕ್ಷವಲ್ಲ, ಪಕ್ಷದಿಂದಲೇ ವ್ಯಕ್ತಿ. ನಾನು ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆ. ದೇವೇಗೌಡ, ಕುಮಾರಸ್ವಾಮಿ ಅವರು ಕೈಗೊಂಡಿರುವ ನಿರ್ಧಾರಕ್ಕೆ ಯಾವುದೇ ಅಪಸ್ವರವಿಲ್ಲದೆ ಗೌರವಿಸುತ್ತೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.