ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಗೆ ಖುದ್ದಾಗಿ ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು(ಶುಕ್ರವಾರ) ಬೆಂಗಳೂರಿಗೆ ಬಂದಿದ್ದಾರೆ.
ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಅವ್ಯವಹಾರ ಮಾಡಿ ರಾಜೀನಾಮೆ ನೀಡಿರುವ ಮಾಜಿ ಸಚಿವ ನಾಗೇಂದ್ರ ಅವರನ್ನು ಪಕ್ಷದಿಂದ ಯಾವಾಗ ಉಚ್ಛಾಟಿಸುತ್ತೀರಿ?.
ಎಲ್ಲವನ್ನು ನುಂಗುವ ಪ್ರಾಚೀನ 'ಸಿದ್ದ ಹಸ್ತ' ಕಲೆಯನ್ನು ಕರಗತ ಮಾಡಿಕೊಂಡ ನಿಮ್ಮದು 100% ಭ್ರಷ್ಟ ಸರ್ಕಾರ ಎಂಬುದನ್ನು ಒಪ್ಪಿಕೊಳ್ಳುತ್ತೀರಾ?.
ಭ್ರಷ್ಟಾಚಾರ ತಮ್ಮ ಮೂಗಿನ ಕೆಳಗೆ ನಡೆಯುತ್ತಿರುವಾಗ ಜಾಣ ಕುರುಡನಂತೆ ವರ್ತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ನಿಮ್ಮ ಕ್ರಮ ಏನು?.
ಶಿಕ್ಷಣ ಮಂತ್ರಿ 5,8 ಮತ್ತು 9 ನೇ ತರಗತಿಯ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇವರ ಬದಲಾವಣೆ ಎಂದು?.
ಲೋಕಸಭಾ ಚುನಾವಣೆಯಲ್ಲಿ ತಮ್ಮ ಜಿಲ್ಲೆಯಲ್ಲಿ ಮುನ್ನಡೆ ಕೊಡಿಸಲು ವಿಫಲವಾಗಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ 17 ಸಚಿವರ ವಿರುದ್ದ ಕ್ರಮ ಯಾವಾಗ ತೆಗೆದುಕೊಳ್ಳುತ್ತೀರಿ? .
ರಾಜ್ಯದ ಅಭಿವೃದ್ಧಿಯನ್ನು ನಿಮ್ಮ ಮತಬ್ಯಾಂಕ್ ರಾಜಕೀಯಕ್ಕಾಗಿ ಬಲಿಕೊಟ್ಟಿದ್ದೀರಿ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯಲ್ಲಿ ಹಿನ್ನಡೆಯಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದಕ್ಕೆ ಯಾರು ಹೊಣೆ?.
ಅನೇಕ ಉದ್ದಿಮೆಗಳು ನೆರೆ ರಾಜ್ಯಗಳ ಪಾಲಾಗಿ ರಾಜ್ಯದ ಯುವಕರು ಉದ್ಯೋಗ ವಂಚಿತರಾಗಿದ್ದಾರೆ. ನಿಮ್ಮ ಸರ್ಕಾರದ ನಿಷ್ಕ್ರಿಯತೆಗೆ ರಾಜ್ಯದ ಕ್ಷಮೆಯಾಚಿಸುತ್ತೀರಾ?.
ರಾಜ್ಯದಲ್ಲಿ ಸರ್ಕಾರವನ್ನು ಟೀಕಿಸಿದವರನ್ನು ಬಂಧಿಸಿ, ಅಭಿಪ್ರಾಯ ಸ್ವಾತಂತ್ರ ಹತ್ತಿಕ್ಕಿ, ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ದವಾಗಿ ನಿಮ್ಮ ಸರ್ಕಾರ ನಡೆದುಕೊಳ್ಳುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಇನ್ನೂ ಹಲವು ಪ್ರಶ್ನೆಗಳು ಇವೆ, ಸದ್ಯಕ್ಕೆ ಈ ಕೆಲ ಪ್ರಶ್ನೆಗಳಿಗೆ ಉತ್ತರಿಸುವಿರೇ? ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.