ADVERTISEMENT

ಸಿ.ಟಿ.ರವಿ ದೊಡ್ಡ ಡ್ರಾಮಾ ಮಾಸ್ಟರ್: ಡಿ.ಕೆ. ಶಿವಕುಮಾರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 8:33 IST
Last Updated 11 ಜನವರಿ 2025, 8:33 IST
<div class="paragraphs"><p>ಡಿ.ಕೆ.ಶಿವಕುಮಾರ ಮತ್ತು&nbsp;ಸಿ.ಟಿ.ರವಿ</p></div>

ಡಿ.ಕೆ.ಶಿವಕುಮಾರ ಮತ್ತು ಸಿ.ಟಿ.ರವಿ

   

ಶೃಂಗೇರಿ (ಚಿಕ್ಕಮಗಳೂರು): 'ಸಿ.ಟಿ.ರವಿ ಅವರನ್ನು ನಾನು ರಾಷ್ಟ್ರೀಯ ನಾಯಕ ಎಂದು ತಿಳಿದುಕೊಂಡಿದ್ದೆ. ಆದರೆ, ಅವರು ದೊಡ್ಡ ಡ್ರಾಮಾ ಮಾಸ್ಟರ್ ಆಗಿದ್ದಾರೆ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಲೇವಡಿ ಮಾಡಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿ.ಟಿ. ರವಿ ಅವರ ಮಾತು-ವಿಚಾರ ನೋಡಿದರೆ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಬೇರೆ ಯಾರು ಒಪ್ಪುವುದು ಬೇಡ, ಆತ್ಮಸಾಕ್ಷಿ ಹೇಳಿದರೆ ಸಾಕು. ರವಿ ಹೀಗೆ ಮಾತನಾಡಬಾರದಿತ್ತು ಎಂದು ಬಿಜೆಪಿಯ ನೂರು ನಾಯಕರೇ ನನಗೆ ಹೇಳಿದ್ದಾರೆ' ಎಂದರು.

ADVERTISEMENT

'ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರೆ ಮುಗಿದು ಹೋಗುತ್ತಿತ್ತು. ಸುಳ್ಳಿಗೆ ಸುಳ್ಳು, ಸುಳ್ಳಿಗೆ ಸುಳ್ಳು ಹೇಳಿಕೊಂಡು ಹೋಗುತ್ತಿದ್ದರೆ ಕೊನೆ ಇಲ್ಲ. ಅವರ ಬಳಿ ತನಿಖೆ ತಂಡ ಇದೆಯಲ್ಲ, ತನಿಖೆ ಮಾಡಿಸಿಕೊಳ್ಳಲಿ' ಎಂದು ಹೇಳಿದರು.

'ನನಗೆ ಯಾರ ಬೆಂಬಲವೂ ಬೇಡ, ನನಗಾಗಿ ಯಾರೂ ಕೂಗುವುದೂ ಬೇಡ. ಯಾವ ನಾಯಕರು, ಶಾಸಕರು, ಬೆಂಬಲಿಗರು ಕೂಗುವುದು ಬೇಡ. ದೇವಸ್ಥಾನಕ್ಕೆ ಹೋಗುವುದನ್ನು ಟೆಂಪಲ್ ರನ್ ಎಂದರೆ ಹೇಗೆ? ಹಾಗಾದರೆ ದೇವಸ್ಥಾನ ಏಕೆ, ಬೀಗ ಹಾಕಿ. ನಾನು ದಿನ ಪೂಜೆ ಮಾಡುತ್ತೇನೆ. ನಾನು ಧರ್ಮದ ಮೇಲೆ ನಂಬಿಕೆ ಇಟ್ಟವನು. ಸಮಾಜ, ಜನ, ರಾಜ್ಯ, ಪಕ್ಷ, ಕುಟುಂಬಕ್ಕಾಗಿ ಪೂಜೆ ಮಾಡುತ್ತೇನೆ. ದೇವನೊಬ್ಬ ನಾಮ ಹಲವು ಎಂಬ ತತ್ವದ ಮೇಲೆ‌ ನಂಬಿಕೆ ಇಟ್ಟವನು ನಾನು. ಅವರವರ ನಂಬಿಕೆ ಅವರವರ ಆಚಾರ-ವಿಚಾರ ಅವರಿಗೆ ಬಿಟ್ಟದ್ದು' ಎಂದರು.

'ರಾಜಕಾರಣದಲ್ಲಿ ಯಾವ ತಿರುವು ಅವಶ್ಯಕತೆ ಇಲ್ಲ. ತಿರುವಿನ ಬಗ್ಗೆ ಎಲ್ಲರ ಮಾತು ಗೌಣ. ಪಕ್ಷ, ಹೈಕಮಾಂಡ್ ಹೇಳಿದ್ದೇ ಅಂತಿಮ. ನನಗೆ ಯಾರ ಒತ್ತಾಯ, ಬೆಂಬಲ ಏನೂ ಬೇಡ. ನನಗಾಗಿ ಕಾರ್ಯಕರ್ತರು, ಶಾಸಕರು, ಬೆಂಬಲಿಗರು, ಕೂಗುವುದು ಬೇಡ. ಮಾಡುವ ಕೆಲಸ ಮಾಡೋಣ. ಫಲಾಫಲ ದೇವರಿಗೆ ಬಿಡೋಣ' ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.