ಬೆಳಗಾವಿ: 'ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ನಡುವಿನ ವಾಗ್ವಾದ ಪ್ರಕಣದ ಕುರಿತು ಸಿಐಡಿ ಅಧಿಕಾರಿಗಳು ಏನು ತಪಾಸಣೆ ಮಾಡುತ್ತಾರೆ? ಎಲ್ಲಿ ಸ್ಥಳ ಮಹಜರು ಮಾಡುತ್ತಾರೆ ಎಂಬುದನ್ನು ತಿಳಿಸಬೇಕು. ನಂತರವಷ್ಟೇ ಅನುಮತಿ ನೀಡುವ ಕುರಿತು ನಿರ್ಧರಿಸಲಾಗುವುದು' ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಶನಿವಾರ ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಘಟನೆ ಸದನದಲ್ಲಿ ನಡೆದಿದೆ. ಅದು ಈಗ ಬಂದ್ ಆಗಿದೆ. ಅಲ್ಲೇನು ಹೊಡದಾಟ ಬಡಿದಾಟ ನಡೆದಿಲ್ಲ. ಸ್ಥಳ ಮಹಜರು ಏನು ಮಾಡುತ್ತಾರೆ, ಎಲ್ಲಿ ಮಾಡುತ್ತಾರೆ ಹೇಳಬೇಕು. ಅಲ್ಲೇನು ಕುರ್ಚಿ ಅಥವಾ ಟೇಬಲ್ ಸ್ಥಳ ಮಹಜರು ಮಾಡುತ್ತಾರೋ ಅಥವಾ ಸದನಕ್ಕೆ ಕರೆದುಕೊಂಡು ಬಂದು ಮಾಡುತ್ತಾರೋ ಅನ್ನೋದನ್ನ ಹೇಳಬೇಕು. ಈಗಲೇ ಅನುಮತಿ ಕೊಡಬೇಕೋ ಕೊಡಬಾರದೋ ಅನೋದನ್ನು ಹೇಳೊಕೆ ಆಗೊದಿಲ್ಲ, ಪರಿಶೀಲನೆ ಮಾಡುತ್ತೇನೆ' ಎಂದರು.
'ಸದ್ಯಕ್ಕೆ ಸಿಐಡಿ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ' ಎಂದರು.
ವಿಡಿಯೊ ಸಾಕ್ಷ್ಯ ಕೊಡಿ ಎಂದು ಸಿಐಡಿ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ನಿನ್ನೆ ವಿಡಿಯೊ ಸಾಕ್ಷ್ಯ ಲಕ್ಷ್ಮೀ ಹೆಬ್ಬಾಳಕರ ಕೊಟ್ಟಿದ್ದಾರೆ, ಮೊದಲು ರವಿ ಕೊಟ್ಟಿದ್ದರು. ರವಿಯವರು ಕೊಟ್ಟಾಗ ಒಂದು ಸೈಡ್ ಆಗಿತ್ತು, ಈಗ ಎರಡು ಕಡೆಯಿಂದ ಬಂದಿದೆ. ನಮ್ಮ ಕಾರ್ಯದರ್ಶಿ ಜತೆಗೆ ನಮ್ಮದೇ ಆಗಿರುವ ತಂಡಕ್ಕೆ ವಿಡಿಯೊ ಕೊಟ್ಟಿದ್ದೇನೆ. ನಾಳೆಗೆ ಅವರು ಏನು ರಿಪೋರ್ಟ್ ಕೊಡ್ತಾರೆ ನೋಡಿ ಎಫ್ಎಸ್ಎಲ್ ಗೆ ಕಳುಹಿಸುತ್ತೇವೆ. ವಿಡಿಯೋ ಸಾಕ್ಷಿ ಎಫ್ ಎಸ್ ಎಲ್ ಗೆ ಹೋಗಿ ಬಂದಬಳಿಕ ಸತ್ಯಾಂಶ ನೋಡಿಕೊಂಡು ನಮ್ದೆ ಆಗಿರುವ ತೀರ್ಮಾನ ಮಾಡುತ್ತೇವೆ' ಎಂದರು.
ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ನಡುವೆ ಸಂಧಾನ ಮಾಡುತ್ತೇವೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, 'ನಾಳೆ ಅಥವಾ ನಾಡಿದ್ದು ಇಬ್ಬರಿಗೂ ಪತ್ರ ಬರೆಯಲು ನಿರ್ಧಾರ ಮಾಡಿದ್ದೇನೆ. ಸಂಧಾನ ಆಗುವ ರೀತಿ ಕಾಣಿಸುತ್ತಿಲ್ಲ. ಈಗ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಆದರೂ ಇಬ್ಬರಿಗೂ ಫೋನ್ ಮಾಡಿ ಸಂಧಾನ ಮಾಡಲು ಪ್ರಯತ್ನಿಸುತ್ತೇನೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.