ADVERTISEMENT

ಸಿ.ಟಿ.ರವಿ ಪ್ರಕರಣ: ನ್ಯಾಯಾಂಗ ತನಿಖೆಗೆ ರಾಜ್ಯಪಾಲಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 16:06 IST
Last Updated 24 ಡಿಸೆಂಬರ್ 2024, 16:06 IST
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಬಿಜೆಪಿ ನಾಯಕರಾದ ಎನ್‌.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಜನಾರ್ದನ ರೆಡ್ಡಿ, ಬಸವರಾಜ ಬೊಮ್ಮಾಯಿ, ಕೇಶವಪ್ರಸಾದ್‌, ಮುನಿರಾಜು, ಆರ್‌.ಅಶೋಕ ಮತ್ತು ಎಸ್.ರಘು ಅವರು ಮನವಿ ಪತ್ರ ನೀಡಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಬಿಜೆಪಿ ನಾಯಕರಾದ ಎನ್‌.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಜನಾರ್ದನ ರೆಡ್ಡಿ, ಬಸವರಾಜ ಬೊಮ್ಮಾಯಿ, ಕೇಶವಪ್ರಸಾದ್‌, ಮುನಿರಾಜು, ಆರ್‌.ಅಶೋಕ ಮತ್ತು ಎಸ್.ರಘು ಅವರು ಮನವಿ ಪತ್ರ ನೀಡಿದರು.   

ಬೆಂಗಳೂರು: ‘ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ’ ಎಂದು  ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ರಾಜ್ಯಪಾಲರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರವಿ ಅವರಿಗೆ ಮಾಡಿರುವ ಅಪಮಾನದ ಬಗ್ಗೆ ಮಾಹಿತಿ ನೀಡಿದ್ದೇವೆ. ರವಿ ಅವರಿಗೆ ಮುಸ್ಲಿಂ ಉಗ್ರವಾದಿಗಳು ಮತ್ತು ನಕ್ಸಲರಿಂದ ಬೆದರಿಕೆ ಇದೆ. ಅವರಿಗೆ ರಕ್ಷಣೆ ನೀಡಬೇಕು ಎಂದು ಕೋರಿದ್ದೇವೆ’ ಎಂದರು.

‘ಪೊಲೀಸರು ರವಿ ಅವರಿಗೆ ಇನ್ನಿಲ್ಲದ ಕಿರುಕುಳ ನೀಡಿದರು. ರವಿ ಅವರಿಗೇ ಹೀಗಾದರೆ ಇನ್ನು ಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ಮೂಡುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆ. ಅದಕ್ಕಾಗಿ ರಾಜ್ಯಪಾಲರು ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ’ ಎಂದರು.

ADVERTISEMENT

‘ಸಿ.ಟಿ.ರವಿ ಎಲ್ಲಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಪ್ರಶ್ನಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸುರಕ್ಷತೆಯ ಕಾರಣ ನೀಡುತ್ತಾರೆ. ಇದು ಬಫೂನ್‌ ಸರ್ಕಾರ. ಇಷ್ಟು ಕೆಟ್ಟದಾಗಿ ಯಾರೂ ಸರ್ಕಾರ ನಡೆಸಿಲ್ಲ.  ಬೆಳಗಾವಿಯ ಪೊಲೀಸ್ ಆಯುಕ್ತರಿಗೆ ನಿರಂತರವಾಗಿ ಕರೆ ಬರುತ್ತಿತ್ತು. ಇವರಿಗೆ ಕರೆ ಮಾಡುತ್ತಿದ್ದವರು ಮುಖ್ಯಮಂತ್ರಿಯೇ ಅಥವಾ ಉಪಮುಖ್ಯಮಂತ್ರಿಯೇ ಎಂಬುದು ಗೊತ್ತಾಗಬೇಕು. ಇದರ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಬೇಕು’ ಎಂದು ಅಶೋಕ ಆಗ್ರಹಿಸಿದರು.

‘ಪೊಲೀಸ್‌ ಠಾಣೆಗಳು ಕಾಂಗ್ರೆಸ್ ಕಚೇರಿಯಾಗಿ ಬದಲಾಗಿವೆ. ಎಲ್ಲ ತನಿಖೆಯನ್ನು ಪೊಲೀಸರೇ ಮಾಡುತ್ತಾರೆ ಎಂದರೆ ಸಿಐಡಿಗೆ ಕೊಟ್ಟರೂ ಮತ್ತೊಬ್ಬರಿಗೆ ಕೊಟ್ಟರೂ ಒಂದೇ. ಪೊಲೀಸರು ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಅದಕ್ಕಾಗಿ ನ್ಯಾಯಾಂಗ ತನಿಖೆಗೆ ಆಗ್ರಹಿಸಲಾಗುತ್ತಿದೆ. ನ್ಯಾಯಾಂಗ ತನಿಖೆಯಲ್ಲಿ ಯಾವುದೇ ತೀರ್ಪು ಬಂದರೂ ಒಪ್ಪಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ವಿಧಾನಪರಿಷತ್ತಿನ ಒಳಗಿನ ವಿಚಾರಗಳಿಗೆ ಸಭಾಪತಿ ತೀರ್ಮಾನವೇ ಬಹಳ ಮುಖ್ಯ ಮತ್ತು ಅಂತಿಮ ಎಂದು ಹೇಳಿದರು.

‘ರವಿ ಅವರಿಗೆ ವಿಧಾನಸೌಧದ ಆವರಣದಲ್ಲಿ ಹಲ್ಲೆ ಯತ್ನ ಮಾಡಿದ್ದು ಯಾರು? ಧಮಕಿ ಹಾಕಿದ್ದು ಯಾರು? ಪೊಲೀಸರು ಒಳಕ್ಕೆ ಬಂದು ಬಂಧಿಸಲು ಯಾರು ಅನುಮತಿ ಕೊಟ್ಟರು? ಸುತ್ತಾಡಿಸಿದ್ದು ಮತ್ತು ಚಿತ್ರ ಹಿಂಸೆ ನೀಡಿದ ಬಗ್ಗೆ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಜನಾರ್ದನ ರೆಡ್ಡಿ, ಮುನಿರಾಜು, ಎಸ್.ರಘು, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೇಶವ ಪ್ರಸಾದ್, ಗೋಪಿನಾಥ ರೆಡ್ಡಿ ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.