ADVERTISEMENT

ಕರಾವಳಿಯಲ್ಲಿ ‘ನಿಸರ್ಗ’ದ ಅಬ್ಬರ: ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 11:40 IST
Last Updated 2 ಜೂನ್ 2020, 11:40 IST
ಕಾರವಾರದಲ್ಲಿ ಮಂಗಳವಾರ ಭಾರಿ ಗಾಳಿ, ಮಳೆಯ ನಡುವೆ ದ್ವಿಚಕ್ರ ವಾಹನ ಸವಾರರೊಬ್ಬರು ಛತ್ರಿ ಹಿಡಿದುಕೊಂಡು ಸಾಗಿದ ರೀತಿ ಹೀಗಿತ್ತು – ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್
ಕಾರವಾರದಲ್ಲಿ ಮಂಗಳವಾರ ಭಾರಿ ಗಾಳಿ, ಮಳೆಯ ನಡುವೆ ದ್ವಿಚಕ್ರ ವಾಹನ ಸವಾರರೊಬ್ಬರು ಛತ್ರಿ ಹಿಡಿದುಕೊಂಡು ಸಾಗಿದ ರೀತಿ ಹೀಗಿತ್ತು – ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್   

ಕಾರವಾರ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ‘ನಿಸರ್ಗ’ ಚಂಡಮಾರುತದಿಂದಾಗಿಜಿಲ್ಲೆಯ ಕರಾವಳಿಯಾದ್ಯಂತ ಮಂಗಳವಾರ ಭಾರಿ ವೇಗದಲ್ಲಿ ಗಾಳಿ ಬೀಸಿತು. ಅಲ್ಲದೇ ಕಾರವಾರ, ಅಂಕೋಲಾ ಭಾಗದಲ್ಲಿ ದಿನವಿಡೀ ಉತ್ತಮ ಮಳೆ ಸುರಿಸಿತು.

ಬೆಳಿಗ್ಗೆಯಿಂದಲೇ ರಭಸದ ಗಾಳಿ ಹಾಗೂ ಗುಡುಗು ಕೂಡ ಜೊತೆಯಾಗಿತ್ತು. ಇಷ್ಟು ದಿನ ಸೆಕೆಯಿಂದ ಬಸವಳಿದಿದ್ದ ಕರಾವಳಿಯ ಜನ, ಮಳೆಯಿಂದ ತಂಪಾದ ವಾತಾವರಣಕ್ಕೆ ಸಂತಸ ಪಟ್ಟರು.

ಗಾಳಿಯ ಹೊಡೆತಕ್ಕೆ ಗೋಕರ್ಣದ ನಾಗಬೀದಿಯಲ್ಲಿರುವ ನಾಗೇಶ್ವರ ದೇವಸ್ಥಾನದ ಮೇಲೆ ಐದು ಮರಗಳು ಉರುಳಿದವು.ಒಂದು ಮಾವಿನ ಮರ, ಮೂರು ತೆಂಗಿನ ಮರ ಹಾಗೂ ಒಂದು ಅಡಿಕೆ ಮರ ಬಿದ್ದ ಕಾರಣ,ದೇಗುಲದ ಒಂದು ಭಾಗಕ್ಕೆ ಹಾನಿಯಾಯಿತು. ಅದೃಷ್ಟವಶಾತ್ಯಾರಿಗೂ ಏನೂ ತೊಂದರೆಯಾಗಿಲ್ಲ.

ADVERTISEMENT

ಸಮುದ್ರ ತೀರದಿಂದ ಮುಖ್ಯರಸ್ತೆಗೆ ಹೋಗುವ ದಾರಿಯಲ್ಲಿ ಹೊಸದಾಗಿ ಕಟ್ಟಿದ ಅಂಗಡಿಯ ಮೇಲೆ ತೆಂಗಿನ ಮರ ಉರುಳಿ ಬಿದ್ದಿದ್ದು,ಅಪಾರ ನಷ್ಟವಾಗಿದೆ. ಬಿಜ್ಜೂರು, ರುದ್ರಪಾದ ಸೇರಿದಂತೆ ಸಮುದ್ರದ ಬದಿಯಲ್ಲಿ ಹಲವು ಮರಗಳು ಗಾಳಿಯ ರಭಸಕ್ಕೆ ಮುರಿದು ಬಿದ್ದವು. ಲಾಕ್‌ಡೌನ್ ಸಂದರ್ಭದಲ್ಲಿ ವಾಹನ ಮತ್ತು ಜನರ ಸಂಚಾರ ನಿಯಂತ್ರಿಸಲು ಪೊಲೀಸರು ರಸ್ತೆ ಬದಿ ಇರಿಸಿದ್ದ ಬ್ಯಾರಿಕೇಡ್‌ಗಳು, ಅವರಿಗೆ ನೆರಳಿಗೆಂದು ಅಳವಡಿಸಿದ್ದ ಟೆಂಟ್‌ಗಳು ಗಾಳಿಯ ರಭಸಕ್ಕೆ ದೂರ ಹಾರಿ ಹೋದವು. ಕಾರವಾರದಲ್ಲಿ ದಿನವಿಡೀ ವಿದ್ಯುತ್ ಪೂರೈಕೆ ಸ್ಥಗಿತವಾಗಿ ನಾಗರಿಕರುತೊಂದರೆಗೀಡಾದರು.

ಕಾರವಾರದಲ್ಲಿ ಕೂಡ ಗಾಳಿಯ ಅಬ್ಬರ ಹೆಚ್ಚಿತ್ತು. ಆಗಾಗ ಬಿರುಸಾದ ಮಳೆಯೂಸುರಿದು ಚರಂಡಿಗಳಲ್ಲಿ ನೀರು ಉಕ್ಕಿ ಹರಿಯಿತು. ಚಂಡಮಾರುತದ ಪರಿಣಾಮ ಜೂನ್ 3ರವರೆಗೆ ಗಂಟೆಗೆ 50ರಿಂದ 60 ಕಿಲೋಮೀಟರ್‌ಗಳ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರದಲ್ಲಿ 2.6 ಮೀಟರ್‌ಗಳಿಂದ 3.8 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸೇರಿದಂತೆ ಯಾರೂ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.

ಉಳಿದಂತೆ, ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಶಿರಸಿ, ಯಲ್ಲಾಪುರ, ಮುಂಡಗೋಡ ಭಾಗದಲ್ಲಿ ತುಂತುರು ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.