ಬೆಂಗಳೂರು: ‘ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಪ್ರಮಾಣ ಹಂಚಿಕೆಗೆ ಅವಕಾಶವಾಗುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನದಾಸ್ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಬೇಕು’ ಎಂದು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಕೋರಿದರು.
ರಾಜ್ಯ ಛಲವಾದಿ ಮಹಾಸಭಾದಿಂದ ಅಂಬೇಡ್ಕರ್ ಭವನದಲ್ಲಿ ನಡೆದ ಒಳ ಮೀಸಲಾತಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಒಳ ಮೀಸಲಾತಿ ಪಡೆಯಲು ಉಪ ಜಾತಿಗಳ ವಿವರ ನೀಡುವುದು ಕಡ್ಡಾಯವಾಗಿದೆ’ ಎಂದರು.
‘ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಎನ್ನುವುದು ಜಾತಿಗಳಲ್ಲ. ಆದರೆ, 101 ಪರಿಶಿಷ್ಟ ಜಾತಿಗಳ ಗುಂಪಿನಲ್ಲಿ ಅವು ಸೇರಿವೆ. ಉಳಿದ 98 ಜಾತಿಗಳಲ್ಲಿ ಬಲಗೈ, ಹೊಲೆಯ, ಛಲವಾದಿ, ಮಹರ್, ಪರೈಯ್ಯ, ಮಾಲ ಜನರು ಕಡ್ಡಾಯವಾಗಿ ಉಪ ಜಾತಿಗಳನ್ನು ನಮೂದಿಸಬೇಕು. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಎಂದು ಗುರುತಿಸಿಕೊಂಡವರು ಹೊಲೆಯ, ಛಲವಾದಿ, ಮಹರ್, ಪರೈಯ್ಯ, ಮಾಲ ಮುಂತಾದ ಉಪ ಜಾತಿಗಳನ್ನು ನಮೂದಿಸಲೇಬೇಕು’ ಎಂದು ಅವರು ಹೇಳಿದರು.
‘ಆಯೋಗ ನಡೆಸಲಿರುವ ಸಮೀಕ್ಷೆಯ ವೇಳೆಯಲ್ಲಿ ಪರಿಶಿಷ್ಟ ಜಾತಿಯವರು ತಮ್ಮ ಧರ್ಮದ ವಿಷಯಕ್ಕೆ ಸಂಬಂಧಿಸಿ ಮಹತ್ವ ನೀಡುವ ಅಗತ್ಯ ಇಲ್ಲ. ಕೆಲವರು ಬೌದ್ದದಮ್ಮ ಎಂದು ನಮೂದಿಸಿದರೆ ಜಾತಿ ಕಲಂನಲ್ಲಿ ಪರಿಶಿಷ್ಟ ಜಾತಿಯ ಉಪ ಜಾತಿ ಹೆಸರು ನಮೂದಿಸಬೇಕು. ಧರ್ಮ ನಮೂದಿಸಿ ಉಪ ಜಾತಿ ನಮೂದಿಸದಿದ್ದರೆ ಅಲ್ಪಸಂಖ್ಯಾತರ ಗುಂಪಿಗೆ ಸೇರ್ಪಡೆ ಆಗಲಿದ್ದಾರೆ. ಅಲ್ಲದೆ, ನಗರಪಟ್ಟಣದಲ್ಲಿ ಜಾತಿ ಸುಳ್ಳು ಹೇಳಿ ಬಾಡಿಗೆ ಮನೆ ಪಡೆದವರೂ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ತಮ್ಮ ಜಾತಿಯನ್ನು ನಮೂದಿಸಬೇಕು’ ಎಂದರು.
ಛಲವಾದಿ ಮಹಾಸಭಾದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಮಾತನಾಡಿ, ‘ಸುಪ್ರೀಂ ಕೋರ್ಟ್ ಆದೇಶಕ್ಕೆ ಪೂರಕವಾಗಿ, ಸರ್ಕಾರವು ಪರಿಶಿಷ್ಟ ಜಾತಿಯ ದತ್ತಾಂಶವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸಂಗ್ರಹಿಸಬೇಕಿದೆ. ಪರಿಶಿಷ್ಟ ಜಾತಿಯವರು ಸ್ವಯಂಸೇವಕರಾಗಿ ಈ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಉಪ ಜಾತಿಯೂ ಸೇರಿದಂತೆ ಎಲ್ಲ ಮಾಹಿತಿಯನ್ನು ಸಮರ್ಪಕವಾಗಿ ನೀಡಬೇಕು’ ಎಂದು ಸಲಹೆ ನೀಡಿದರು.
ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕ ಬಿ.ಬಿ. ನಿಂಗಯ್ಯ, ನಿವೃತ್ತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ, ದಲಿತ ಮುಖಂಡರಾದ ಡಿ.ಜಿ. ಸಾಗರ್, ಮಹಾಸಭಾದ ಪ್ರಮುಖರಾದ ಟಿ.ಆರ್. ಶಿವರಾಮು, ಜಿ. ಮಹದೇವಯ್ಯ, ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಬಲಗೈ ಸಮುದಾಯದ ನಾಯಕರು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಪರಿಶಿಷ್ಟ ಜಾತಿ ಉಪ ಜಾತಿಗಳ ಸಾಮಾಜಿಕ ಶೈಕ್ಷಣಿಕ ಔದ್ಯೋಗಿಕ ಆರ್ಥಿಕ ಹಾಗೂ ಪ್ರಾತಿನಿಧ್ಯ ಸಮೀಕ್ಷೆ–2025ರಲ್ಲಿ ಸಮುದಾಯದ ಎಲ್ಲರೂ ತಮ್ಮ ಉಪ ಜಾತಿಗಳನ್ನು ಕಡ್ಡಾಯವಾಗಿ ನಮೂದಿಸಬೇಕುಡಿ. ಚಂದ್ರಶೇಖರಯ್ಯ ಅಧ್ಯಕ್ಷ ರಾಜ್ಯ ಸರ್ಕಾರಿ ಎಸ್‌ಸಿ ಎಸ್‌ಟಿ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.