ADVERTISEMENT

ಮಾಯಾವತಿ ಜತೆ ಮಾತನಾಡಲು ಬಿಜೆಪಿಗೆ ತಾಕತ್ತೆಲ್ಲಿದೆ: ಮಾರಸಂದ್ರ ಮುನಿಯಪ್ಪ ಪ್ರಶ್ನೆ

ಬಿಎಸ್‌ಪಿ ವಿಭಾಗೀಯ ಮಟ್ಟದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 14:10 IST
Last Updated 18 ಮಾರ್ಚ್ 2022, 14:10 IST
ಸಮಾವೇಶದಲ್ಲಿ ಬಿ.ಆರ್. ಅಂಬೇಡ್ಕರ್ ಮತ್ತು ಕಾನ್ಶಿರಾಮ್‌ ಅವರ ಭಾವಚಿತ್ರಗಳಿಗೆ ಪ್ರಸನ್ನಾನಂದ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು. ಸುರೇಂದ್ರ ಸಿಂಗ್ ಕಲೋರಿಯಾ, ಎಂ.ಕೃಷ್ಣಮೂರ್ತಿ, ಮಾರಸಂದ್ರ ಮುನಿಯಪ್ಪ ಇದ್ದರು –ಪ್ರಜಾವಾಣಿ ಚಿತ್ರ
ಸಮಾವೇಶದಲ್ಲಿ ಬಿ.ಆರ್. ಅಂಬೇಡ್ಕರ್ ಮತ್ತು ಕಾನ್ಶಿರಾಮ್‌ ಅವರ ಭಾವಚಿತ್ರಗಳಿಗೆ ಪ್ರಸನ್ನಾನಂದ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು. ಸುರೇಂದ್ರ ಸಿಂಗ್ ಕಲೋರಿಯಾ, ಎಂ.ಕೃಷ್ಣಮೂರ್ತಿ, ಮಾರಸಂದ್ರ ಮುನಿಯಪ್ಪ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಉತ್ತರ ಪ್ರದೇಶದಲ್ಲಿ ಬಿಜೆಪಿ ಜತೆ ಬಿಎಸ್‌ಪಿ ಹೊಂದಾಣಿಕೆ ಮಾಡಿಕೊಂಡಿದೆ ಎಂಬುದು ಮಾಧ್ಯಮಗಳ ಅಪಪ್ರಚಾರ. ಮಾಯಾವತಿ ಎದುರು ನಿಂತು ಮಾತನಾಡುವ ತಾಕತ್ತು ಬಿಜೆಪಿಯವರಿಗೆ ಎಲ್ಲಿದೆ’ ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಪ್ರಶ್ನಿಸಿದರು.

ಕಾನ್ಶಿರಾಮ್‌ ಅವರ 89ನೇ ಜಯಂತಿ ಅಂಗವಾಗಿ ಸಂವಿಧಾನದ ಮತ್ತು ಬಹುಜನರ ಹಕ್ಕುಗಳ ಸಂರಕ್ಷಣೆಗಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಎಸ್‌ಪಿ ವಿಭಾಗೀಯ ಮಟ್ಟದ ಸಮವೇಶದಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಮತ್ತು ಕಾಂಗ್ರೆಸ್‌ ಬಿಟ್ಟರೆ ದೇಶದ ಮೂರನೇ ದೊಡ್ಡ ರಾಷ್ಟ್ರೀಯ ಪಕ್ಷ ಎಂದರೆ ಬಿಎಸ್‌ಪಿ. 1.25 ಕೋಟಿ ಮತಗಳನ್ನು ಉತ್ತರ ಪ್ರದೇಶದಲ್ಲಿ ಪಡೆದುಕೊಂಡಿದೆ. ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದ ಮಾಯಾವತಿ ಅವರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದರೆ ನಂಬಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ADVERTISEMENT

‘ನಮ್ಮ ಬಳಿ ಮಾಧ್ಯಮ ಇಲ್ಲ ಎಂಬ ಕಾರಣಕ್ಕೆ ಈ ರೀತಿ ಅಪಪ್ರಚಾರ ನಡೆಸುವುದು ತರವಲ್ಲ. ಡಾ.ಬಿ.ಆರ್‌.ಅಂಬೇಡ್ಕರ್, ಕಾನ್ಶಿರಾಮ್‌ ಅವರಿಗೂ ಅಂದಿನ ಮಾಧ್ಯಮಗಳು ಅವಮಾನ ಮಾಡಿದ್ದವು. ಇದಕ್ಕೆ ಉತ್ತರ ನೀಡುವ ಕಾಲ ದೂರ ಇಲ್ಲ’ ಎಂದರು.

’ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ವರದಿ ಜಾರಿಗೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಎಲ್ಲರೂ ಒಗ್ಗಟ್ಟಿನಿಂದ ಬೆಂಬಲ ನೀಡಬೇಕಿದೆ’ ಎಂದು ಹೇಳಿದರು.

‘ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದಾಗ ಆ ಸಮುದಾಯದ ಮಠಾಧೀಶರು ಬೀದಿಗೆ ಇಳಿದರು. ಅವರೆಲ್ಲರು ಜಗದ್ಗುರುಗಳಲ್ಲ, ಜಾತಿ ಗುರುಗಳು. ಯಡಿಯೂರಪ್ಪ ನಂತರ ಆ ಸ್ಥಾನಕ್ಕೆ ಶ್ರೀರಾಮುಲು ಅಥವಾ ಗೋವಿಂದ ಕಾರಜೋಳ ಅವರ ಹೆಸರು ಏಕೆ ಬರಲಿಲ್ಲ. ಆ ಮಠಾಧೀಶರು ಮಾಡುತ್ತಿರುವುದು ರಾಜಕೀಯ ಅಲ್ಲವೇ? ರಾಜ್ಯದಲ್ಲಿ 1.50 ಕೋಟಿ ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲ ಉಪಜಾತಿಗಳು ಒಂದಾದರೆ ರಾಜಕೀಯ ಅಧಿಕಾರ ತಾನಾಗಿಯೇ ಬರಲಿದೆ. ಆ ಕಡೆಗೆ ಸಮುದಾಯ ಚಿಂತಿಸಬೇಕು’ ಎಂದರು.

ಆಶೀರ್ವಚನ ನೀಡಿದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ₹500, ₹1000ಕ್ಕೆ ಮತಗಳನ್ನು ಮಾರಾಟ ಮಾಡಿಕೊಳ್ಳಬಾರದು. ಒಂದು ಮತದ ಮೌಲ್ಯ ₹770 ಕೋಟಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸ್ವಾಭಿಮಾನ ಬೆಳಸಿಕೊಂಡು ರಾಜಕೀಯ ಅಧಿಕಾರ ಹಿಡಿಯಬೇಕು’ ಎಂದು ಹೇಳಿದರು.‌

ಬಿಎಸ್‌ಪಿ ರಾಜ್ಯ ಸಂಯೋಜಕರಾದ ಸುರೇಂದ್ರ ಸಿಂಗ್ ಕಲೋರಿಯಾ, ದಿನೇಶ್ ಗೌತಮ್, ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ಬಿ.ವಾಸು, ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.