ADVERTISEMENT

ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪ | ಸಾಕ್ಷಿನಾಶ ಸಾಧ್ಯತೆ; ದಸಂಸ ಕಳವಳ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 7:41 IST
Last Updated 3 ಸೆಪ್ಟೆಂಬರ್ 2022, 7:41 IST
   

ಹುಬ್ಬಳ್ಳಿ: 'ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ದಾಖಲಾದ ಪೋಕ್ಸೊ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಗೆ ಒಳಪಡಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು' ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮರೀಶ್ ನಾಗಣ್ಣವರ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಬೇಕು. ಆದರೆ, ಚಿತ್ರದುರ್ಗದ ಮುರುಘಾ ಶರಣರನ್ನು ಆರು ದಿನಗಳ ಬಳಿಕ ಬಂಧಿಸಲಾಗಿದೆ. ಉಳ್ಳವರಿಗೆ ಒಂದು ನ್ಯಾಯ, ದೀನರಿಗೆ ಒಂದು ನ್ಯಾಯ ಎನ್ನುವಂತಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಪ್ರಕರಣಕ್ಕೆ ಸಂಬಂಧಿಸಿ ಮುರುಘಾ ಶರಣರ ಬೆಂಬಲಿಗರು ಸಾಕ್ಷಿ ನಾಶಮಾಡುವಲ್ಲಿ ನಿರತರಾಗಿದ್ದಾರೆ. ಪೊಲೀಸರು ಪ್ರಾಮಾಣಿಕ ತನಿಖೆ ನಡೆಸಿ ಸತ್ಯ ಹೊರಹಾಕಬೇಕು. ಮುರುಘಾ ಶರಣರು ಪೀಠ ತ್ಯಾಗ ಮಾಡಿ ತನಿಖೆಗೆ ಸಹಕರಿಸಬೇಕು. ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು, ವಿವಿಧ ಮಠಾಧೀಶರು ಸಹ ಮುರುಘಾ ಶರಣರ ಪರವಾಗಿಯೇ ನಿಲ್ಲುತ್ತಿರುವ ಸಂಶಯ ವ್ಯಕ್ತವಾಗುತ್ತಿದೆ. ಪ್ರಕರಣ ಮುಚ್ಚಿಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ' ಎಂದು ಆರೋಪಿಸಿದರು.

ADVERTISEMENT

ಮಂಜುನಾಥ ಕಿನಕೇರಿ, ಬಸಪ್ಪ ಮಾದರ, ಪ್ರಶಾಂತ ಅಣ್ಣಿಗೇರಿ ಮತ್ತು ಮಂಜುನಾಥ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.