ADVERTISEMENT

ರೈತ ದಸರಾ ಸಂಭ್ರಮ: ಪಾರಂಪರಿಕ ಉಡುಗೆಯಲ್ಲಿ ಟಾಂಗಾ ಸವಾರಿ ಮಾಡಿದ 42 ಜೋಡಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 3:04 IST
Last Updated 1 ಅಕ್ಟೋಬರ್ 2022, 3:04 IST
ರೈತ ದಸರಾ ಮೆರವಣಿಗೆಯಲ್ಲಿ ಹಾವೇರಿಯ ಟಗರು ಬಂಡಿ ಗಮನ ಸೆಳೆಯಿತು
ರೈತ ದಸರಾ ಮೆರವಣಿಗೆಯಲ್ಲಿ ಹಾವೇರಿಯ ಟಗರು ಬಂಡಿ ಗಮನ ಸೆಳೆಯಿತು   

ಮೈಸೂರು: ದಸರಾ ಉತ್ಸವದ ಪ್ರಯುಕ್ತ ನಗರದಲ್ಲಿ ಶುಕ್ರವಾರದಿಂದ ಆರಂಭಗೊಂಡ ರೈತ ದಸರಾಕ್ಕೂ ಮುನ್ನ ನಡೆದ ಮೆರವಣಿಗೆ ಮನಸೂರೆಗೊಂಡಿತು. ಇಡೀ ಮೆರವಣಿಗೆಯು ಗ್ರಾಮೀಣ ಕೃಷಿ ಸಂಸ್ಕೃತಿಯ ‘ಮಿನಿ ಜಂಬೂಸವಾರಿ’ಯಂತೆ ಕಂಗೊಳಿಸಿತು.

ನಗರದ ಕೋಟೆ ಆಂಜನೇಯ ಸ್ವಾಮಿ ಮುಂಭಾಗ ನಂದಿಗೆ ಪೂಜೆ ಸಲ್ಲಿಸಿ ಹಾಗೂ ನಗಾರಿ ಬಾರಿಸಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರೊಂ
ದಿಗೆ ಎತ್ತಿನಗಾಡಿ ಏರಿ ಜಾನಪದ ಕಲಾತಂಡಗಳ ಮೂಲಕ ಸಾಗಿದರು.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಅಲಂಕೃತ ‘ಟಗರು ಬಂಡಿ ಗಾಡಿ’, ಅದರ ಜೊತೆಗೇ ತಿ.ನರಸೀಪುರ ತಾಲ್ಲೂಕಿನ ಬನ್ನೂರಿನ 5 ಜೊತೆ ಹಳ್ಳಿಕಾರ್‌ ತಳಿಯ ಹೋರಿಗಳು ಸಾಗಿ ಬಂದವು.

ADVERTISEMENT

ಮಂಡ್ಯ ಜಿಲ್ಲೆ ಮಳವಳ್ಳಿಯ 4.5 ವರ್ಷದ 6.5 ಅಡಿ ಎತ್ತರ, 900 ಕೆ.ಜಿ. ತೂಕದ ‘ಕೃಷ್ಣ’ ಹೋರಿಯೂ ಆಕರ್ಷಿಸಿತು. ಅದರೊಂದಿಗೆ ನಂದಿ ಧ್ವಜ, ಡೊಳ್ಳು ಕುಣಿತ,ಟಿಬೆಟನ್ ನೃತ್ಯ, ಗಿರಿಜನರ ನೃತ್ಯ, ನಾದಸ್ವರ, ಕಂಸಾಳೆ, ಕೀಲುಗೊಂಬೆ ತಂಡಗಳು ಮೆರವಣಿಗೆಗೆ ಮೆರುಗು ತಂದವು.

ವಿವಿಧ ಯೋಜನೆಗಳ ಕುರಿತ ಮಾಹಿತಿ ಫಲಕಗಳನ್ನು ಅಳವಡಿಸಿದ್ದ ತೋಟಗಾರಿಕೆ, ಕೃಷಿ, ಅರಣ್ಯ, ಪಶುಸಂಗೋಪನೆ ಇಲಾಖೆಯ
ಹತ್ತಾರು ಸ್ತಬ್ಧಚಿತ್ರಗಳು ಕಲಾತಂಡಗಳೊಂದಿಗೇ ಸಾಗಿದವು.

ಜಯಚಾಮರಾಜ ಒಡೆಯರ್‌ ವೃತ್ತದಿಂದ ಶುರುವಾದ ಮೆರವಣಿಗೆಯು ಜೀವರಾಯನಕಟ್ಟೆ ಮೈದಾನದಲ್ಲಿ ಅಂತ್ಯಗೊಂಡಿತು. ರೈತ ದಸರಾ ಅ.2ರವರೆಗೂ ನಡೆಯಲಿದೆ.

ಪಾರಂಪರಿಕ ಟಾಂಗಾ ಸವಾರಿ: ಪರಂಪರೆಯ ಮಹತ್ವವನ್ನು ಸಾರಲೆಂದೇ ಈ ಬಾರಿ ಪಾರಂಪರಿಕ ಕಟ್ಟಡಗಳ ಕಡೆಗೆ ಸೈಕಲ್‌ ಸವಾರಿ, ಪಾರಂಪರಿಕ ಉಡುಗೆಯಲ್ಲಿ ಟಾಂಗಾ ಸವಾರಿ ಮತ್ತು ನಡಿಗೆಯನ್ನು ಏರ್ಪಡಿಸಲಾಗಿದೆ.

ಬೆಳಿಗ್ಗೆ ನಡೆದ ಟಾಂಗಾ ಸವಾರಿಗೂ ಮುನ್ನ, ಕೊಡವ ದಿರಿಸು, ಮಹಾರಾಜರ ಉಡುಗೆ, ಮೈಸೂರು ಪೇಟಾ, ಪಂಚೆ ಹಾಗೂ ಮೈಸೂರು ರೇಷ್ಮೆ ಸೀರೆಯಲ್ಲಿ ಭಾಗವಹಿಸಿದ್ದ ಜೋಡಿಗಳಿಗೆ ಬಾಗಿನ ನೀಡಿ ಸ್ವಾಗತಿಸಲಾಯಿತು. 42 ಜೋಡಿಗಳು ದಿನ
ವನ್ನು ಅವಿಸ್ಮರಣೀಯವಾಗಿಸಿಕೊಂಡರು. ಶೆಲ್ವಪಿಳ್ಳೆ ಅಯ್ಯಂಗಾರ್ ಅವರು ಪಾರಂಪರಿಕ ಕಟ್ಟಡಗಳ ಮಾಹಿತಿ ನೀಡಿದರು. ಟಾಂಗಾ ಸವಾರಿಯಲ್ಲಿ ತೆರಳುತ್ತಿದ್ದ ದಂಪತಿಯನ್ನು ಸಾರ್ವಜನಿಕರು ಕುತೂಹಲದಿಂದ ನೋಡಿದರು.

ಸಂಪನ್ಮೂಲ ವ್ಯಕ್ತಿ ಎನ್.ಎಸ್.ರಂಗರಾಜು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳ ಇದ್ದರು. ಅ.1ರಂದು ಪುರಭವನದ ಆವರಣದಿಂದ ಪಾರಂಪರಿಕ ನಡಿಗೆ ಏರ್ಪಾಡಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.