ADVERTISEMENT

ಈ ಬಾರಿಯ ದಸರಾ ಉದ್ಘಾಟನೆಗೆ ಸಾಹಿತಿ ಎಸ್.ಎಲ್.ಭೈರಪ್ಪ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 10:44 IST
Last Updated 14 ಆಗಸ್ಟ್ 2019, 10:44 IST
   

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಈ ಬಾರಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಉದ್ಘಾಟಿಸಲಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಉದ್ಘಾಟನೆಗೆ ಭೈರಪ್ಪ ಅವರನ್ನು ಆಹ್ವಾನಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.

‘ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಇರುವುದು ನಿಜ. ಅದ್ದೂರಿ, ಸಾಂಪ್ರದಾಯಿಕ ಆಚರಣೆ ಬಗ್ಗೆ ಚರ್ಚಿಸಿಲ್ಲ. ಹಿಂದೆಯೂ ಇಂಥ ಸಂದಿಗ್ಧಸ್ಥಿತಿಯಲ್ಲೂ ಆಚರಣೆ ಮಾಡಲಾಗಿದೆ. ಹಾಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಆಚರಣೆ ಮಾಡಲಾಗುತ್ತಿದ್ದು, ಯಾವುದೇ ರೀತಿಯ ವಿಂಗಡಣೆ ಮಾಡಿಲ್ಲ’ ಎಂದು ಸಭೆಯ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ADVERTISEMENT

ಸ್ಥಳೀಯರಿಗೆ ಅವಕಾಶ: ಹಿಂದಿನ ವರ್ಷಗಳಲ್ಲಿ ಹೊರ ರಾಜ್ಯದ ಕಲಾವಿದರಿಗೂ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಆದರೆ ಈ ಸಲ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ನಿರ್ಧರಿಸಿದ್ದು, ರಾಜ್ಯದವರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ಇದರಿಂದಾಗಿ ನಮ್ಮ ಕಲಾವಿದರನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ ಎಂದು ಅವರು ವಿವರಿಸಿದರು.

ದಸರಾ ಆಚರಣೆ ಹಾಗೂ ಈ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ₹20.50 ಕೋಟಿ ನೀಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.