ಬೆಂಗಳೂರು: ‘ಅನರ್ಹರು ಬಿಪಿಎಲ್ ಪಡಿತರ ಚೀಟಿ ಪಡೆಯುವುದನ್ನು ತಪ್ಪಿಸಲು ಪಹಣಿ, ವಾಹನ ನೋಂದಣಿ, ನೌಕರರ ವಿವರಗಳನ್ನು ಪಡಿತರ ಚೀಟಿ ದತ್ತಾಂಶಗಳ ಜತೆ ಬೆಸೆಯಬೇಕು’ ಎಂದು ಆಡಳಿತ ಸುಧಾರಣಾ ಆಯೋಗ–2 ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಂಟನೇ ವರದಿಯನ್ನು ಗುರುವಾರ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಆಯೋಗ ಅಧ್ಯಕ್ಷ ಆರ್.ವಿ. ದೇಶಪಾಂಡೆ ಈ ಕುರಿತು ಮಾಹಿತಿ ನೀಡಿದರು.
‘ಮೂರು ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ದರೆ ಬಿಪಿಎಲ್ ಪಡಿತರ ಚೀಟಿ ಪಡೆಯುವಂತೆ ಇಲ್ಲ. ಕೃಷಿ ಭೂಮಿಯ ದತ್ತಾಂಶಗಳನ್ನು ಪಡಿತರ ಚೀಟಿಗಳ ದತ್ತಾಂಶಗಳ ಜತೆ ಸಮೀಕರಿಸಿದರೆ ಕೃಷಿ ಭೂಮಿ ಹೊಂದಿರುವವರ ವಿವರಗಳನ್ನು ಪರಿಶೀಲಿಸಲು ಸುಲಭವಾಗುತ್ತದೆ’ ಎಂದು ಹೇಳಿದರು.
ಎಚ್‌ಆರ್‌ಎಂಎಸ್ ತಂತ್ರಾಂಶದಿಂದ ಸರ್ಕಾರಿ ನೌಕರರ ಮಾಹಿತಿ, ವಾಹನ ನೋಂದಣಿ ದತ್ತಾಂಶ, ಆಸ್ತಿ ನೋಂದಣಿ ವಿವರಗಳನ್ನು ಆಹಾರ ಇಲಾಖೆಯ ಪಡಿತರ ವ್ಯವಸ್ಥೆಗೆ ಜೋಡಿಸಬೇಕು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ನಿಗದಿಪಡಿಸಿದ ಮಾನದಂಡ ಮತ್ತು ವಿಧಾನವನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಪರಿಗಣಿಸಬೇಕು. ಗ್ರಾಮೀಣ, ನಗರ ಪ್ರದೇಶಗಳ ಗ್ರಾಮ ಅಥವಾ ವಾರ್ಡ್ ಸಭೆಗಳಲ್ಲೇ ಬಿಪಿಎಲ್ ಕುಟುಂಬಗಳನ್ನು ಗುರುತಿಸಿ, ಅಂತಿಮ ಅನುಮೋದನೆ ಪಡೆಯಬೇಕು ಎಂಬ ಶಿಫಾರಸು ಮಾಡಲಾಗಿದೆ ಎಂದರು.
ಆದಾಯ ಪ್ರಮಾಣಪತ್ರ ವಿತರಣೆಗೆ ಏಕರೂಪದ ವಿಧಾನ ಅನುಸರಿಸಬೇಕು. ಒಂದು ಕುಟುಂಬದ ಎಲ್ಲ ಸದಸ್ಯರಿಗೂ ಪ್ರತ್ಯೇಕ ಆದಾಯ ಪ್ರಮಾಣಪತ್ರ ನೀಡ ಬಾರದು ಎಂದು ಹೇಳಿದರು.
ಪ್ರಮುಖ ಶಿಫಾರಸುಗಳು
ಶಿಫಾರಸು ಅನುಷ್ಠಾನಕ್ಕೆ ಮೇಲ್ವಿಚಾರಣಾ ಸಮಿತಿ
ಧರ್ಮಾದಾಯ ಮತ್ತು ದತ್ತಿ ಆಯುಕ್ತರಿಗೆ ದೇಗುಲಗಳಲ್ಲಿ ಹೊಸ ಹುದ್ದೆ ಮಂಜೂರಾತಿ ಅಧಿಕಾರ
ಮುದ್ರಣ ಸಾಮಗ್ರಿಗಳ ದರ ಹೆಚ್ಚಳ
ಐಐಟಿ, ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ 15 ವರ್ಷಕ್ಕಿಂತ ಹಳೆಯ ಯಂತ್ರಗಳ ಬದಲಾವಣೆ
ನಗರಗಳ ಅನುಮೋದಿತ ನೀಲನಕ್ಷೆ ಅನುಷ್ಠಾನಕ್ಕೆ ಎರಡು ವರ್ಷಗಳ ಮಿತಿ
ಧಾರವಾಡದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಶಾಖೆ
ತಾಂತ್ರಿಕ ಲೆಕ್ಕ ಪರಿಶೋಧನೆಯ ವ್ಯಾಪ್ತಿ ವಿಸ್ತಾರ
ಆಯೋಗದ ಶೇ 30ರಷ್ಟು ಶಿಫಾರಸುಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಶೇ 53ರಷ್ಟು ಶಿಫಾರಸುಗಳು ಅನುಷ್ಠಾನವಾಗುತ್ತಿವೆ.– ಆರ್.ವಿ. ದೇಶಪಾಂಡೆ, ಅಧ್ಯಕ್ಷ, ಆಡಳಿತ ಸುಧಾರಣಾ ಆಯೋಗ–2
5,228: ಎಂಟು ವರದಿಗಳ ಒಟ್ಟು ಶಿಫಾರಸು
1,506: ಅನುಷ್ಠಾನಗೊಂಡ ಶಿಫಾರಸು
1,950: ಪರಿಶೀಲನೆಯಲ್ಲಿರುವ ಶಿಫಾರಸು
351: ಅಂಗೀಕರಿಸದ ಶಿಫಾರಸುಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.