ADVERTISEMENT

ಕೊಡಗು: ಡಿ.ಸಿ ಕಚೇರಿಗೆ ₹ 5 ಕೋಟಿ, ಗೋಡೆಗೆ ₹ 7.5 ಕೋಟಿ

ಕೆ.ಎಸ್.ಗಿರೀಶ್
Published 19 ಜುಲೈ 2022, 17:58 IST
Last Updated 19 ಜುಲೈ 2022, 17:58 IST
ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯ ಸ್ಲ್ಯಾಬ್‌ಗಳು ಬೀಳದಂತೆ ತಡೆಯಲು ಮರಳಿನ ಮೂಟೆಗಳನ್ನಿರಿಸುವ ಕಾಮಗಾರಿ ಮಂಗಳವಾರ ಭರದಿಂದ ನಡೆಯಿತು
ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯ ಸ್ಲ್ಯಾಬ್‌ಗಳು ಬೀಳದಂತೆ ತಡೆಯಲು ಮರಳಿನ ಮೂಟೆಗಳನ್ನಿರಿಸುವ ಕಾಮಗಾರಿ ಮಂಗಳವಾರ ಭರದಿಂದ ನಡೆಯಿತು   

ಮಡಿಕೇರಿ: ಇಲ್ಲಿನ ಮಂಗಳೂರು ರಸ್ತೆಯಲ್ಲಿರುವ ಕೊಡಗು ಜಿಲ್ಲಾಡಳಿತ ಭವನದ ನಿರ್ಮಾಣಕ್ಕೆ ₹ 5 ಕೋಟಿ ವೆಚ್ಚ ಮಾಡಿದ್ದರೆ, ಅದರ ತಡೆಗೋಡೆಗೆ ₹ 7.5 ಕೋಟಿ ವೆಚ್ಚ ಮಾಡಲಾಗಿದೆ. ಹೀಗಿದ್ದರೂ, ತಡೆಗೋಡೆ ಸುಭದ್ರವಾಗಿಲ್ಲ.

12 ಮೀಟರ್ ಎತ್ತರ ಹಾಗೂ 130 ಮೀಟರ್‌ ಉದ್ದದ ತಡೆಗೋಡೆ ಮೇಲ್ನೋಟಕ್ಕೆ ಕೋಟೆಯಂತೆ ಭಾಸವಾಗುತ್ತದೆ. ‘ಮೇಲೆಲ್ಲಾ ಥಳುಕು, ಒಳಗೆಲ್ಲಾ ಹುಳುಕು’ ಎಂಬಂತೆ ಅದರ ಕಾಂಕ್ರೀಟ್ ಸ್ಲ್ಯಾಬ್‌ಗಳು ಹೊರಚಾಚಿದ್ದು, ಕುಸಿದು ನೆಲಕ್ಕಪ್ಪಳಿಸುವ ಭೀತಿ ಸೃಷ್ಟಿಸಿವೆ. ಹೀಗಾಗಿ ಇಲ್ಲಿ ಸಂಚಾರ ನಿಷೇಧಿಸಲಾಗಿದೆ.

ಜಿಲ್ಲಾಡಳಿತ ಭವನವು 2006ರಲ್ಲಿ ನಿರ್ಮಾಣವಾದ ಬಳಿಕ ಅದರ ಮುಂದಿನ ಮಂಗಳೂರು ರಸ್ತೆಯಲ್ಲಿ ಮಣ್ಣು ಕುಸಿತಗಳು ಸಂಭವಿಸಿದ್ದವು. ಅದನ್ನು ಗಮನಿಸಿದ ಸರ್ಕಾರ 2019ರಲ್ಲಿ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿತ್ತು. ಹೈದರಾಬಾದ್ ಮೂಲದ ಅಯ್ಯಪ್ಪ ಕನ್‌ಸ್ಟ್ರಕ್ಷನ್‌ ಕಂಪನಿಯು ಗುತ್ತಿಗೆ ಪಡೆದು 2020ರಲ್ಲಿ ನಿರ್ಮಾಣ ಕಾರ್ಯವನ್ನು ಆರಂಭಿಸಿತ್ತು. ಇದುವರೆಗೆ ಶೇ 80ರಷ್ಟು ಕೆಲಸ ಮಾತ್ರ ಮುಗಿದಿದೆ.

ADVERTISEMENT

ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮೊದಲೇ ಸ್ಲ್ಯಾಬ್‌ಗಳು ಹೊರಚಿದ್ದು, ‘ಇದು ಕಳಪೆ ಕಾಮಗಾರಿ’ ಎಂಬ ಆರೋಪಗಳೂ ಕೇಳಿ ಬಂದಿವೆ. ‘ಕೊಡಗಿನ ಮಣ್ಣಿಗೆ ಸೂಕ್ತವಲ್ಲದ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ’ ಎಂದು ಆಡಳಿತ ಪಕ್ಷದ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್‌ ಪ್ರತಿಪಾದಿಸಿದ್ದಾರೆ.

ಈ ಕುರಿತು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಪ್ರತಿಕ್ರಿಯಿಸಿ, ‘ಸಾಂಪ್ರದಾಯಿಕ ತಡೆಗೋಡೆ ನಿರ್ಮಿಸಲು ಕನಿಷ್ಠ 7 ಮೀಟರ್‌ ಆದರೂ ಜಾಗ ಬೇಕು. ಆದರೆ, ಇಲ್ಲಿ ರಸ್ತೆ ತೀರ ಚಿಕ್ಕದಾಗಿದ್ದರಿಂದ 2 ಮೀಟರ್‌ನಲ್ಲೇ ನಿರ್ಮಿಸಬೇಕಿತ್ತು. ಹಾಗಾಗಿ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೇಳಿದ ಆರ್‌.ಇ (ರಿ ಇನ್‌ಫೋರ್ಸ್‌ಮೆಂಟ್) ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.