ADVERTISEMENT

ಐಎಂಎ ಹಗರಣ | ಡಿ.ಸಿ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:18 IST
Last Updated 12 ಜುಲೈ 2019, 19:18 IST
   

ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ (ಐ ಮಾನಿಟರಿ ಅಡ್ವೈಸರಿ) ಹಗರಣದ ಆರೋಪಿಗಳಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್‌ ಮತ್ತು ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಅವರಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿರುವ ಸ್ಥಳೀಯ ನ್ಯಾಯಾಲಯ ಒಟ್ಟು ನಾಲ್ವರು ಆರೋಪಿಗಳನ್ನು ಇದೇ 25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸದ್ಯ ಎಸ್‌ಐಟಿ (ವಿಶೇಷ ತನಿಖಾ ತಂಡ) ವಶದಲ್ಲಿ ವಿಚಾರಣೆ ಎದುರಿಸಿರುವ ವಿಜಯ ಶಂಕರ್ ಮತ್ತು ನಾಗರಾಜ್‌ ಮಧ್ಯಂತರ ಜಾಮೀನು ಕೋರಿ ಶುಕ್ರವಾರ ಅರ್ಜಿ ಸಲ್ಲಿಸಿದರು. ಈ ಅರ್ಜಿಗಳನ್ನು ಸಿಟಿ ಸಿವಿಲ್‌ ಸೆಷನ್ಸ್ ಕೋರ್ಟ್‌ನ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ವಿಚಾರಣೆ ನಡೆಸಿದರು.

ನಾಗರಾಜ್‌ ಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್‌ ಮತ್ತು ವಿಜಯಶಂಕರ್ ಪರ ವೈ.ಆರ್.ಸದಾಶಿವ ರೆಡ್ಡಿ ವಾದ ಮಂಡಿಸಿ, ‘ಅರ್ಜಿದಾರರು ಕಾನೂನು ಪ್ರಕಾರವೇ ತಮ್ಮ ಕೆಲಸ ಮಾಡಿದ್ದಾರೆ. ಅವರು ಮುಗ್ಧರು ಮತ್ತು ಸರ್ಕಾರಿ ನೌಕರರು. ಮಧ್ಯಂತರ ಜಾಮೀನು ನೀಡದೇ ಹೋದರೆ ಅವರ ಸಂವಿಧಾನದತ್ತ ಮೂಲಭೂತ ಹಕ್ಕು ಉಲ್ಲಂಘನೆ ಆಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿದರು.

ADVERTISEMENT

ಇದಕ್ಕೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಂ.ನಾರಾಯಣ ರೆಡ್ಡಿ, ‘ಆರೋಪಿಗಳು ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಮೇಲ್ನೋಟಕ್ಕೆ ಅವರ ವಿರುದ್ಧದ ಅಪರಾಧ ಸಾಬೀತಾಗುವಂತಿದೆ. ಇವರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ನೀಡಬಹುದಾಗಿದೆ. ಜಾಮೀನು ನೀಡಿದರೆ ತನಿಖೆಗೆ ತೊಂದರೆ ಆಗುತ್ತದೆ’ ಎಂದು ಆಕ್ಷೇಪಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಜಯಶಂಕರ್, ನಾಗರಾಜ್‌ ಹಾಗೂ ಮಂಜುನಾಥ್‌ ಅವರ ಮಧ್ಯಂತರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.