ADVERTISEMENT

‘ಜುಲೈ– ಆಗಸ್ಟ್‌ನಲ್ಲಿ ಡಿಸಿಇಟಿ: 2021–22ಕ್ಕೆ ಪ್ರವೇಶ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 22:44 IST
Last Updated 14 ಮಾರ್ಚ್ 2021, 22:44 IST

ಬೆಂಗಳೂರು: ‘2021ರ ಜುಲೈ– ಆಗಸ್ಟ್‌ನಲ್ಲಿ ನಡೆಯುವ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿಸಿಇಟಿ) 2021-22ನೇ ಸಾಲಿಗೆ ಲ್ಯಾಟರಲ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅನ್ವಯಿಸಲಿದೆ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

ಡಿಸಿಇಟಿ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, 'ವಿದ್ಯಾರ್ಥಿ ವೇತನಕ್ಕೆ ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ನರ್ಸಿಂಗ್, ಪ್ಯಾರಾ ಮೆಡಿಕಲ್, ಫಾರ್ಮಸಿ ಮುಂತಾದ ಕೋರ್ಸ್‍ಗಳಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ದತ್ತಾಂಶವನ್ನು ಕೆಇಎಯಿಂದ ಪಡೆಯಲಾಗುವುದು’ ಎಂದಿದ್ದಾರೆ.

‘ವಿದ್ಯಾರ್ಥಿಗಳ ನೈಜತೆ, ವಿಶ್ವಾಸ ಯೋಗ್ಯ ಮಾಹಿತಿ ಪ್ರಮಾಣೀಕರಿಸಲು ವಿದ್ಯಾರ್ಥಿಗಳ ದತ್ತಾಂಶವನ್ನು ಅವರು ಅಧ್ಯಯನ ಮಾಡುತ್ತಿರುವ ವಿಶ್ವವಿದ್ಯಾಲಯಗಳು ಮತ್ತು ಇಲಾಖೆಗಳಿಂದ ಪಡೆಯಲಾಗುತ್ತದೆ. 2020-2021ನೆ ಸಾಲಿಗೆ ರಾಜ್ಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಸೇರಿದಂತೆ ಎಲ್ಲ ವಿಭಾಗಗಳ ವಿದ್ಯಾರ್ಥಿ ವೇತನಕ್ಕೂ ಅರ್ಜಿ ಸಲ್ಲಿಸಲು ಇದೇ ಜಾಲತಾಣವಾಗಿದ್ದು, ಹೆಚ್ಚಿನ ಮಾಹಿತಿಯನ್ನು ಈ ಜಾಲತಾಣದಿಂದ ಪಡೆಯಬಹುದು’ ಎಂದೂ ತಿಳಿಸಿದ್ದಾರೆ.

ADVERTISEMENT

‘ವಿದ್ಯಾರ್ಥಿಗಳು ಕಡಿಮೆ ಸಮಯದಲ್ಲಿ, ಹೆಚ್ಚಿನ ದಾಖಲಾತಿ ಒದಗಿಸದೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಈ ವ್ಯವಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಧ್ಯಯನಕ್ಕಾಗಿ ತುಂಬಿರುವ ಶುಲ್ಕ ರಸೀದಿ ಮಾತ್ರ ಅಪ್‍ಲೋಡ್ ಮಾಡಬೇಕು. ಕೌನ್ಸೆಲಿಂಗ್‌ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಮುಂದಿನ 10 ದಿನಗಳಲ್ಲಿ ದತ್ತಾಂಶವನ್ನು ಜಾಲತಾಣಕ್ಕೆ ಅಳವಡಿಸಲಾಗುವುದು. ಡಿಸಿಇಟಿ ಮುಖಾಂತರ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಭರಿಸುವ ಶುಲ್ಕ ಮರು ಪಾವತಿಗೆ ಸಂಬಂಧಿಸಿದ ವಿಷಯವಾಗಿದ್ದರೆ, ಈ ವಿದ್ಯಾರ್ಥಿಗಳಿಗೆ ಪೂರಕವಾಗಿ ಕ್ರಮ ಕೈಗೊಳ್ಳಲಾಗುವುದು. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೇ 31ರವರೆಗೆ ಅವಧಿ ವಿಸ್ತರಿಸಲಾಗಿದೆ’ ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.