ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಜೆಡಿಎಸ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ, ಆ ಪಕ್ಷದ ಅಸ್ತಿತ್ವವನ್ನು ಕಿತ್ತುಕೊಳ್ಳಲು ಬಿಜೆಪಿಗೆ ಹೇಗೆ ಸಾಧ್ಯ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಪಾದಯಾತ್ರೆ ವಿಚಾರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಅಪಸ್ವರ ಮೂಡಿರುವ ಬಗ್ಗೆ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿಯಾಗಲಿ, ನಾನಾಗಲಿ, ಬಿಜೆಪಿಯವರಾಗಲಿ ಎಲ್ಲರೂ ಅವರವರ ಪಕ್ಷದ ರಾಜಕಾರಣ ಮಾಡುತ್ತಾರೆ. ಕುಮಾರಸ್ವಾಮಿ ತಮ್ಮ ಪಕ್ಷದ ಹಾಗೂ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುತ್ತಾರೆಂದು ನಾನು ಭಾವಿಸಿದ್ದೇನೆ. ಈ ವಿಚಾರಕ್ಕೇ ಮೈತ್ರಿಯಲ್ಲಿ ತಿಕ್ಕಾಟ ನಡೆಯುತ್ತಿರಬಹುದು’ ಎಂದರು.
‘ಬಿಜೆಪಿಯವರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದಲ್ಲಿ ಸುಮಾರು 10 ಕ್ಷೇತ್ರಗಳನ್ನು ಗೆದ್ದಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಜೆಡಿಎಸ್ ನೆಲೆ ಇರುವ ಪ್ರದೇಶ. ಇಲ್ಲಿ ಬಿಜೆಪಿಯವರು ಜೆಡಿಎಸ್‌ನವರನ್ನು ಪರಿಗಣಿಸದೆ ತಮಟೆ ಬಾರಿಸಿಕೊಂಡು ನಾಯಕತ್ವ ಅಪಹರಿಸಲು ಹೋದರೆ ಅದನ್ನು ಸಹಿಸಿಕೊಳ್ಳಲು ಜೆಡಿಎಸ್‌ಗೆ ಸಾಧ್ಯವೇ?’ ಎಂದರು.
ಪಾದಯಾತ್ರೆಗೆ ತಿರುಗೇಟು ನೀಡಲು ಸಿದ್ಧತೆ: ‘ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪಾದಯಾತ್ರೆಗೆ ತಿರುಗೇಟು ನೀಡಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯ 30 ಹಗರಣಗಳಿವೆ. ದಿನಾ ಒಂದೊಂದು ಹಗರಣ ಬಿಚ್ಚಿಡುತ್ತೇವೆ. ಅವರ ಪಾದಯಾತ್ರೆ ಅಂತಿಮ ರೂಪುರೇಷೆ ಬಂದರೆ, ನಾವು ನಮ್ಮ ಕಾರ್ಯಸೂಚಿ ತೀರ್ಮಾನಿಸುತ್ತೇವೆ’ ಎಂದರು.
ಕೇಂದ್ರ ಸರ್ಕಾರ ರಾಜಭವನದ ಮೂಲಕ ರಾಜ್ಯ ಸರ್ಕಾರ ಕೆಡವಲು ಪ್ರಯತ್ನಿಸುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, ‘ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ವಿವರಣೆ ನೀಡುತ್ತೇನೆ’ ಎಂದರು.
ಬೆಂಗಳೂರು ಅಭಿವೃದ್ಧಿ ಬಗ್ಗೆ ಪ್ರಧಾನಿ ಜತೆ ಚರ್ಚೆ: ಪ್ರಧಾನಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ‘ಬೆಂಗಳೂರಿನ ವರ್ತುಲ ರಸ್ತೆಗೆ ಮಿಲಿಟರಿ ಭೂಮಿ ಬೇಕಾಗಿದೆ. ಅದನ್ನು ದೊರಕಿಸಿಕೊಡುವಂತೆ ಮನವಿ ಮಾಡಿದ್ದೇವೆ. ಈ ವಿಚಾರವಾಗಿ ರಕ್ಷಣಾ ಸಚಿವರು ಮತ್ತು ನಗರಾಭಿವೃದ್ಧಿ ಸಚಿವರನ್ನೂ ಭೇಟಿ ಮಾಡಿದ್ದೇವೆ. ಸುರಂಗ ರಸ್ತೆ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ನೀಡಬೇಕು. ಅಲ್ಲದೆ, ಈ ಹಿಂದೆ ಬಜೆಟ್‌ನಲ್ಲಿ ಘೋಷಣೆಯಾಗಿರುವ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಈ ವಿಚಾರಗಳನ್ನು ಪರಿಗಣಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.