ADVERTISEMENT

ತೋರ ಭೂಕುಸಿತ: ಮತ್ತೊಂದು ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 12:52 IST
Last Updated 22 ಆಗಸ್ಟ್ 2019, 12:52 IST
ವಿರಾಜಪೇಟೆ ತಾಲ್ಲೂಕಿನ ತೋರ ಭೂಕುಸಿತದಲ್ಲಿ ಮೃತಪಟ್ಟ ಲೀಲಾ ಅವರ ಸಂಬಂಧಿಕರಿಗೆ ಶಾಸಕ ಕೆ.ಜಿ.ಬೋಪಯ್ಯ ಚೆಕ್ ವಿತರಿಸಿದರು
ವಿರಾಜಪೇಟೆ ತಾಲ್ಲೂಕಿನ ತೋರ ಭೂಕುಸಿತದಲ್ಲಿ ಮೃತಪಟ್ಟ ಲೀಲಾ ಅವರ ಸಂಬಂಧಿಕರಿಗೆ ಶಾಸಕ ಕೆ.ಜಿ.ಬೋಪಯ್ಯ ಚೆಕ್ ವಿತರಿಸಿದರು   

ವಿರಾಜಪೇಟೆ: ಸಮೀಪದ ತೋರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಲೀಲಾ (50) ಅವರ ಮೃತದೇಹ ಗುರುವಾರ ಪತ್ತೆಯಾಗಿದೆ.

ಆ.9ರಂದು ಗ್ರಾಮದಲ್ಲಿ ಸಂಭವಿಸಿದ್ದ ದುರಂತದಲ್ಲಿ ಮೃತಪಟ್ಟವರ ಪೈಕಿ ಈವರೆಗೆ 6 ಮಂದಿಯ ಶವಗಳು ಪತ್ತೆಯಾಗಿವೆ. ನಾಪತ್ತೆಯಾಗಿರುವ ಉಳಿದ 4 ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಲೀಲಾ ಅವರ ಪತಿ ಅಪ್ಪು ಕೂಡ ಈ ದುರಂತದಲ್ಲಿ ಮೃತಪಟ್ಟಿದ್ದು, ಕೆಲವು ದಿನಗಳ ಹಿಂದೆ ಅವರ ಶವ ಪತ್ತೆಯಾಗಿತ್ತು. ಈ ದಂಪತಿಗೆ ಮಕ್ಕಳಿರಲಿಲ್ಲ ಎನ್ನಲಾಗಿದೆ.

ADVERTISEMENT

ಗ್ರಾಮದ ತೋಟವೊಂದರ ಲೈನ್‌ಮನೆಯಲ್ಲಿ ಇವರು ವಾಸವಾಗಿದ್ದರು. ನಾಪತ್ತೆಯಾದವರ ಪತ್ತೆಗಾಗಿ ಎನ್‌ಡಿಆರ್‌ಎಫ್, ಸೇನೆ, ಗರುಡ ತಂಡ ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಬಳಿಕ, ವಿರಾಜಪೇಟೆ ಪಟ್ಟಣದ ಮೀನುಪೇಟೆಯಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಪರಿಹಾರ: ಮೃತರಾದ ಲೀಲಾ ಅವರ ಸಹೋದರ ಕೆ.ಬಿ.ಶಿವದಾಸ್ ಅವರಿಗೆ ಶಾಸಕ ಕೆ.ಜಿ.ಬೋಪಯ್ಯ ಅಂತ್ಯಸಂಸ್ಕಾರದ ಪರಿಹಾರ ಮೊತ್ತದ ಚೆಕ್ ನೀಡಿದರು.

ತಹಶೀಲ್ದಾರ್ ಪುರಂದರ, ಕಂದಾಯ ಇಲಾಖೆಯ ಪಳಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ, ಶಶಿ ಸುಬ್ರಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.