ADVERTISEMENT

ದೆಹಲಿ: ರೈತ ಹೋರಾಟಗಾರರಿಗೆ ಕನ್ನಡಿಗನ ನೆರವು

ನೈತಿಕ ಬೆಂಬಲ ನೀಡಿದ ಯುವ ಸಂಘಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 21:30 IST
Last Updated 19 ನವೆಂಬರ್ 2021, 21:30 IST
ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಡುಗೆ ಸಿದ್ಧಪಡಿಸುತ್ತಿರುವ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ –(ಸಂಗ್ರಹ ಚಿತ್ರ)
ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಡುಗೆ ಸಿದ್ಧಪಡಿಸುತ್ತಿರುವ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ –(ಸಂಗ್ರಹ ಚಿತ್ರ)   

ನವದೆಹಲಿ: ಹೆಚ್ಚು ಕಡಿಮೆ ಸತತ ಒಂದು ವರ್ಷದಿಂದ ದೆಹಲಿಯ ಗಡಿಗಳಲ್ಲಿ ನಡೆದಿರುವ ರೈತರ ಹೋರಾಟಕ್ಕೆ ಮೊದಲ ದಿನದಿಂದಲೇ ನೈತಿಕ ಬೆಂಬಲ ಘೋಷಿಸಿ,ಅವರಿಗೆ ನೆರವಾಗಿ ನಿಂತವರಲ್ಲಿ ಕನ್ನಡಿಗರೊಬ್ಬರಿದ್ದಾರೆ.

ತಮ್ಮ ಸಂಘಟನೆಯ ಹೆಸರು ಹೇಳಿಕೊಳ್ಳದೆ, ಬ್ಯಾನರ್‌ ಬಳಸದೆ, ರೈತ ಹೋರಾಟಗಾರರ ‘ಹೊಟ್ಟೆ–ನೆತ್ತಿ’ಯ ಚಿಂತೆ ಮಾಡಿದ್ದು ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ, ಭದ್ರಾವತಿ ಮೂಲದ ಬಿ.ವಿ. ಶ್ರೀನಿವಾಸ್‌.

ದೆಹಲಿಯ ಮೂರೂ ಗಡಿಗಳಲ್ಲಿ ಪ್ರತಿಭಟನಾನಿರತ ಸಾವಿರಾರು ರೈತರಿಗೆ, ನಿತ್ಯವೂ ಅವರ ಭೇಟಿಗೆ ಬರುತ್ತಿದ್ದ ರೈತ ಸಂಘಟನೆಗಳ ಸದಸ್ಯರಿಗೆ ಊಟ, ತಿಂಡಿ, ವೈದ್ಯಕೀಯ ನೆರವು, ಗಂಟೆಗೆ 2,200 ರೊಟ್ಟಿ ಸಿದ್ಧಪಡಿಸುವ ಯಂತ್ರ, ವಸತಿಗೆ ಟೆಂಟ್‌, ಫ್ಯಾನ್‌, ಕಂಬಳಿ, ಸ್ವೆಟರ್‌ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸಿದವರಲ್ಲಿ ಇವರ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ.

ADVERTISEMENT

‘ರೈತರಿಗೆ ಬೆಂಬಲವಾಗಿ ನಿಲ್ಲಬೇಕೆಂಬ ನಿರ್ಧಾರಕ್ಕೆ ಸಂಘಟನೆಯ ಬಹುತೇಕ ಯುವಪಡೆ ಒಪ್ಪಿಗೆ ಸೂಚಿಸಿದ್ದೇ ತಡ, ಮೊದಲ ದಿನದಿಂದಲೇ ಗಡಿಗಳಿಗೆ ಧುಮುಕಿದೆವು. ರಾಜಕೀಯೇತರ ಸಂಘಟನೆಗಳಿಗೆ ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದ್ದುದರಿಂದ ನಾವು ಹೊರಗಿನಿಂದಲೇ ಈ ಮೂಲಕ ಬೆಂಬಲ ನೀಡಿದೆವು’ ಎಂದು ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮದು ರಾಜಕೀಯ ಸಂಘಟನೆ ಎಂಬುದು ಪ್ರತಿಭಟನಾಕಾರರಿಗೆ ಮೂರು ತಿಂಗಳ ನಂತರವಷ್ಟೇ ಗೊತ್ತಾಯಿತು. ನಾವು ಹೋರಾಟದಲ್ಲಿ ರಾಜಕೀಯ ಬೆರೆಸುವ ಮನಸ್ಸು ಮಾಡದಿದ್ದುದೂ ಅದಕ್ಕೆ ಕಾರಣ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದ ನಮ್ಮ ಸೇವೆಯನ್ನು ಮುಂದುವರಿಸಲೂ ರೈತರು ಅನುವು ಮಾಡಿಕೊಟ್ಟರು’ ಎಂದೂ ಅವರು ಹೇಳಿದರು.

ಕಾಯ್ದೆ ವಿರುದ್ಧ ಹೋರಾಟಕ್ಕಿಳಿದ ರೈತರನ್ನು ‘ಖಲಿಸ್ತಾನ್‌ ಬೆಂಬಲಿಗರು’, ‘ಕಮ್ಯುನಿಸ್ಟರು’, ‘ಕಾಂಗ್ರೆಸ್ಸಿನವರು’,
‘ದೇಶದ್ರೋಹಿಗಳು’ ಎಂದು ದೂಷಿಸಿದವರೇ ಕೊನೆಗೆ ಸೋತರು. ಕಾಯ್ದೆ ರದ್ದತಿಯ ನಿರ್ಧಾರವು ‘ಸಂವಿಧಾನ’ಕ್ಕೆ, ಮಹಾತ್ಮ ಗಾಂಧೀಜಿ ಸಾರಿದ ‘ಶಾಂತಿ ಮಂತ್ರ’ಕ್ಕೆ ದೊರೆತ ಗೆಲುವು ಎಂಬುದು ಸಮಾಧಾನದ ಸಂಗತಿ ಎಂದ ಅವರು, 770 ಜನ ರೈತರು ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಅವರ ಹೆಸರು ಚಿರಸ್ಥಾಯಿಯಾಗಬೇಕಿದೆ. ಹುತಾತ್ಮ ರೈತರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕಿದೆ ಎಂದೂ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.