ADVERTISEMENT

ಲ್ಯಾಪ್‌ಟಾಪ್ ಖರೀದಿಯಲ್ಲಿ ಅಕ್ರಮ: ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಒಂದು ಲ್ಯಾಪ್‌ಟಾಪ್‌ಗೆ ₹14 ಸಾವಿರದಿಂದ ₹28 ಸಾವಿರಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 23:35 IST
Last Updated 19 ಮಾರ್ಚ್ 2020, 23:35 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಪದವಿ ಕಾಲೇಜುಗಳಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುವ ಯೋಜನೆಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಗುರುವಾರ ಬಜೆಟ್‌ ಮೇಲೆ ಮಾತನಾಡಿದ ಅವರು, ಲ್ಯಾಪ್‌ ಟಾಪ್ ಕರ್ಮಕಾಂಡದ ದಾಖಲೆ ತಮ್ಮ ಬಳಿ ಇದೆ ಎಂದರು.

ತಮ್ಮ ನೇತೃತ್ವದ ಸರ್ಕಾರದ ಅವಧಿಯಲ್ಲಿ ₹14,290 ಕ್ಕೆ ಲ್ಯಾಪ್‌ಟಾಪ್ ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿತ್ತು. ಅದನ್ನು ಈಗ ₹28,320 ಹೆಚ್ಚಿಸಲಾಗಿದೆ. ಅತ್ಯಾಧುನಿಕ ತಂತ್ರಾಂಶ ಹಾಗೂ ಹೆಚ್ಚಿನ ಅನುಕೂಲಗಳಿರುವ ಲ್ಯಾಪ್‌ಟಾಪ್‌ ಆಗಿದ್ದರೂ ₹2 ಸಾವಿರ–₹ 3 ಸಾವಿರ ಹೆಚ್ಚಳವಾಗಬಹುದು. ದುಪ್ಪಟ್ಟು ಬೆಲೆ ನೀಡಿ ಖರೀದಿಸಿರುವುದು ಸಂಶಯಕ್ಕೆ ಕಾರಣವಾಗಿದೆ
ಎಂದರು.

ADVERTISEMENT

‘ಮೈತ್ರಿ ಸರ್ಕಾರದ ಅವಧಿಯಲ್ಲಿ ಟೆಂಡರ್ ಅಂತಿಮವಾಗಿತ್ತು. ನಮ್ಮ ಸರ್ಕಾರದಲ್ಲಿ ಆಗಿದ್ದಲ್ಲ’ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ‘ನಿಮ್ಮ ನೇತೃತ್ವದ ಸರ್ಕಾರ ಕೊಟ್ಟ ಲ್ಯಾಪ್‌ಟಾಪ್ ಗುಣಮಟ್ಟದ್ದಾಗಿರಲಿಲ್ಲ’ ಎಂದು ಕೆಲವು ಬಿಜೆಪಿ ಸದಸ್ಯರು ಹೇಳಿದರು.

ಕಾಂಗ್ರೆಸ್‌ನ ಕೆ.ಆರ್. ರಮೇಶ್‌ ಕುಮಾರ್, ‘ಯಾರದ್ದೇ ಸರ್ಕಾರದ ಅವಧಿಯಲ್ಲೇ ನಡೆದಿರಲಿ. ಇದು ಸಾರ್ವಜನಿಕರ ತೆರಿಗೆಯ ಹಣ. ತನಿಖೆ ನಡೆಯದಿದ್ದರೆ ಈ ಸದನದಲ್ಲಿ ಇರುವವರಿಗೆ ಗೌರವ ಇರುವುದಿಲ್ಲ’ ಎಂದರು.

‘ಮಾಹಿತಿ ಹಕ್ಕಿನಡಿ ದಾಖಲೆ ಪಡೆಯಲಾಗಿದೆ. ಬೆಲೆ ಜಾಸ್ತಿಯಾಗಿದ್ದು ಏಕೆ ಎಂಬ ಪ್ರಶ್ನೆಗೆ, ಸರ್ಕಾರವನ್ನು ಕೇಳಿ ಉತ್ತರ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ. ಇದು ಅನುಮಾನಕ್ಕೆ ಕಾರಣ’ ಎಂದು ಸಿದ್ದರಾಮಯ್ಯ ಹೇಳಿದರು.

ಇಂದಿರಾ ಕ್ಯಾಂಟಿನ್‌ನಲ್ಲಿ ಯಾವುದೇ ಅಕ್ರಮಗಳು ನಡೆದಿದ್ದರೆ, ಆ ಬಗ್ಗೆಯೂ ತನಿಖೆ ನಡೆಸಿ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.