ADVERTISEMENT

ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನಿಗದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 15:49 IST
Last Updated 8 ಜೂನ್ 2022, 15:49 IST
   

ಬೆಂಗಳೂರು: ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳನ್ನು ‘ಅತಿ ಹಿಂದುಳಿದ’ ಮತ್ತು ‘ಹಿಂದುಳಿದ’ ವರ್ಗಗಳು ಎಂಬುದಾಗಿ ವರ್ಗೀಕರಿಸಿ, ಈ ಸಮುದಾಯಗಳ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಒದಗಿಸುವಂತೆ ಒತ್ತಾಯಿಸಿ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ‘ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆ ಗುರುತಿಸಲು ನೇಮಕಗೊಂಡಿರುವ ನ್ಯಾಯಮೂರ್ತಿ ಕೆ.ಭಕ್ತವತ್ಸಲ ನೇತೃತ್ವದ ಆಯೋಗಕ್ಕೆ ಮನವಿ ಸಲ್ಲಿಸಿದೆ.

‘ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸುವ ಮೊದಲು ಪ್ರಾಥಮಿಕ ಮತ್ತು ದ್ವಿತೀಯ ಮೂಲದ ಮಾಹಿತಿಗಳನ್ನು ಪಡೆದು, ಪರಿಶೀಲಿಸಬೇಕು. ಸಮಕಾಲೀನ ಪ್ರಾಯೋಗಿಕ ಅಂಕಿಅಂಶಗಳ ಆಧಾರದಲ್ಲಿ ಕಟ್ಟುನಿಟ್ಟಿನ ವಿಚಾರಣೆ ನಡೆಸಿದ ಬಳಿಕ ಆಯೋಗವು ಅತಿ ಹಿಂದುಳಿದ ಮತ್ತು ಹಿಂದುಳಿದ ವರ್ಗಗಳನ್ನು ಗುರುತಿಸಬೇಕು’ ಎಂದು ವೇದಿಕೆ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್‌, ಪ್ರಧಾನ ಕಾರ್ಯದರ್ಶಿ ಎಂ. ನಾಗರಾಜು ಮತ್ತು ಖಜಾಂಚಿ ಎಲ್‌.ಎ. ಮಂಜುನಾಥ್‌ ಆಗ್ರಹಿಸಿದ್ದಾರೆ.

ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿವೆ. ಈ ಸಮುದಾಯಗಳು ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಹೊಂದಿರುವ ಕುರಿತು 2010ರ ನವೆಂಬರ್‌ 25ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜೆ.ಎಸ್‌. ಖೇಹರ್‌ ನೇತೃತ್ವದ ವಿಭಾಗೀಯ ಪೀಠವು ನೀಡಿದ್ದ ತೀರ್ಪಿನಲ್ಲಿ ಕೆಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಇಂತಹ ವಿಚಾರಗಳನ್ನೂ ಆಯೋಗವು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಶಾಸಕರು, ಸಂಸದರು ಮತ್ತು ವಿವಿಧ ಹಂತದ ಸ್ಥಳೀಯ ಸಂಸ್ಥೆಗಳಲ್ಲಿ ಈವರೆಗೆ ದೊರಕಿರುವ ಜಾತಿವಾರು ಪ್ರಾತನಿಧ್ಯ, ಸಹಕಾರ ಸಂಸ್ಥೆಗಳಲ್ಲಿ ದೊರಕಿರುವ ಪ್ರಾತಿನಿಧ್ಯದ ಮಾಹಿತಿಯನ್ನೂ ಸಂಗ್ರಹಿಸಬೇಕು. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಿಗದಿಪಡಿಸಿರುವ ಕಾಲಮಿತಿಯೊಳಗೆ ಅಧ್ಯಯನ ಪೂರ್ಣಗೊಳಿಸಲು ಸಾಧ್ಯವೇ ಎಂಬುದನ್ನು ಆಯೋಗ ತೀರ್ಮಾನಿಸಬೇಕು. ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸುವ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆಗಳನ್ನು ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.